ಬಾಗಲಕೋಟೆ: ಹಲಕುರ್ಕಿ ಗ್ರಾಮದಲ್ಲಿ ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 2,000 ಎಕರೆ ಜಮೀನು ಪಡೆದುಕೊಳ್ಳುವುದಕ್ಕೆ ನಿರ್ಧಾರ ಮಾಡಲಾಗಿದೆ. ಪತ್ರಿ ಎಕರೆಗೆ 18 ಲಕ್ಷ ರೂಪಾಯಿಯಂತೆ ರೈತರಿಗೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಾದಾಮಿ ಐತಿಹಾಸಿಕ ತಾಣ ಹಾಗೂ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಆಗಿದೆ. ಹೀಗಾಗಿ ಹಲಕುರ್ಕಿ ಗ್ರಾಮದಲ್ಲಿ ವಿಮಾನ ನಿಲ್ದಾಣ ಮತ್ತು ಕೈಗಾರಿಕಾ ಅಭಿವೃದ್ಧಿ ಮಾಡಿದ್ರೆ, ಇಡೀ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಲ್ಲರೂ ಸಹ ಒಗ್ಗಟ್ಟಾಗಿ ಭೂಮಿ ನೀಡಿದರೆ ಮಾತ್ರ ಅಭಿವೃದ್ಧಿಗೆ ಸಿದ್ಧ. ಒತ್ತಾಯ ಪೂರ್ವಕವಾಗಿ ಜಮೀನು ಪಡೆದುಕೊಳ್ಳುವುದಿಲ್ಲ ಎಂದು ನಿರಾಣಿ ಅವರು ಸ್ಪಷ್ಟಪಡಿಸಿದರು.
ಪ್ರತಿ ಎಕರೆಗೆ 18 ಲಕ್ಷ ರೂ. ನೀಡಲು ಸರ್ಕಾರ ಸಿದ್ಧ: ಇದೇ ಸಮಯದಲ್ಲಿ ಮಾತನಾಡಿದ ಅವರು ಹಲಕುರ್ಕಿಯಲ್ಲಿ ತೆಗೆದುಕೊಂಡ ಜಮೀನಿನಲ್ಲಿ ನಿರಾಣಿ ಅವರು ಒಂದು ಎಕರೆ ಸಹ ತೆಗೆದುಕೊಳ್ಳುವುದಿಲ್ಲ. ವಿನಾಕಾರಣ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ಸುಮಾರು 80 ಎಕರೆ ಪ್ರದೇಶ ಪ್ರತಿ ಏಕರೆ 9 ಲಕ್ಷದಂತೆ ಮಾರಾಟವಾಗಿದೆ. ಈ ಹಿನ್ನೆಲೆ ನೋಂದಣಿ ಇಲಾಖೆ ಮಾಹಿತಿ ಪ್ರಕಾರ, 5 ಲಕ್ಷ ರೂಪಾಯಿಗಳ ನೋಂದಣಿ ಆಗಿದೆ. ಆದರೆ ಕೈಗಾರಿಕೆ ಅಭಿವೃದ್ಧಿಗಾಗಿ ಹಲಕುರ್ಕಿ ಗ್ರಾಮದಲ್ಲಿ ಪ್ರತಿ ಎಕರೆಗೆ 18 ಲಕ್ಷ ರೂಪಾಯಿದಂತೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದರು.
ಸ್ವಇಚ್ಛೆಯಿಂದ ಭೂಮಿ ನೀಡಿದ್ರೆ ತೆಗೆದುಕೊಳ್ಳುತ್ತೇವೆ: ಪ್ರತಿಶತ 75 ರಷ್ಟು ರೈತರು ತಮ್ಮ ಜಮೀನು ನೀಡಲು ಮುಂದಾಗಿದ್ದಾರೆ. ಆದರೆ 25 ರಷ್ಟು ಜನರಿಂದ ಮಾತ್ರ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಪ್ರತಿಭಟನೆ, ರಾಜಕೀಯ ಮಾಡುವುದು ನಮಗೆ ಸಾಕಷ್ಟು ಅನುಭವವಾಗಿದೆ. ಆದರೆ ನಮ್ಮ ಮತಕ್ಷೇತ್ರದ ರೈತರು, ಎಲ್ಲರೂ ನಮ್ಮ ಜೊತೆಗೆ ಒಳ್ಳೆಯ ಸಂಬಂಧ ಇರುವುದರಿಂದ ರೈತರಿಗೆ ಅನುಕೂಲವಾಗುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆ ಸ್ವಇಚ್ಛೆಯಿಂದ ಭೂಮಿ ನೀಡಿದರೆ ಮಾತ್ರ, ತೆಗೆದುಕೊಳ್ಳುತ್ತೇವೆ. ಇಲ್ಲವಾದಲ್ಲಿ ಕೈ ಬಿಡುವುದಾಗಿ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಮಾನ ನಿಲ್ದಾಣ, ಕಾರ್ಖಾನೆ ನಿರ್ಮಾಣಕ್ಕೆ ಒತ್ತಾಯ ಪೂರ್ವಕವಾಗಿ ರೈತರ ಜಮೀನು ವಶಪಡಿಸಿಕೊಳ್ಳಲ್ಲ: ಸಚಿವ ನಿರಾಣಿ
ಹಲಕುರ್ಕಿ ಗ್ರಾಮದ ರೈತರೊಂದಿಗೆ ಸಭೆ ಕರೆಯಲಾಗಿತ್ತು. ಆದರೆ ರೈತರು ಬಾರದ ಹಿನ್ನೆಲೆ ನಮ್ಮ ನಿಲುವನ್ನು ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಲಾಗಿದೆ. ಮುಂದಿನ ವಾರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಮಾಧ್ಯಮಗಳೊಂದಿಗೆ ಭೇಟಿ ನೀಡಿ, ಮನವೊಲಿಸುವ ಯತ್ನ ಮಾಡಲಾಗುವುದು. ಅವರು ನಮ್ಮ ಕ್ಷೇತ್ರದ ಜನರು, ನಮ್ಮವರೇ ಹೋಗಿ ಭೇಟಿ ಆಗಿ ಮಾತುಕತೆ ಮಾಡುತ್ತೇನೆ ಎಂದು ಹೇಳಿದರು.
ಬೀಳಗಿ ಮತಕ್ಷೇತ್ರದಿಂದಲೇ ಸ್ಪರ್ಧೆ: ಇದೇ ಸಮಯದಲ್ಲಿ ಯತ್ನಾಳ ಹಾಗೂ ಪಕ್ಷದ ಆತಂಕರಿಕ ವಿರೋಧಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವ ಮುರಗೇಶ ನಿರಾಣಿ ನಿರಾಕರಿಸಿದರು. ಮುಂದಿನ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದು, ಬೀಳಗಿ ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡಿಲ್ಲ. ಶಾಸಕನಾಗಿ ಸಚಿವನಾಗಿ ನನ್ನ ರಾಜಕೀಯ ಜೀವನದ ಮೈಲುಗಲ್ಲು ಆಗಿರುವ ಬೀಳಗಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಬೇರೆ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಊಹಾಪೋಹವಾಗಿದೆ ಎಂದು ಸ್ಪಷ್ಟ ಪಡಿಸಿದರು.