ಬಾಗಲಕೋಟೆ: ಬಸವಣ್ಣನ ಐಕ್ಯಸ್ಥಳ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಕೂಡಲಸಂಗಮಕ್ಕೆ ನಾಳೆಯಿಂದ ಭಕ್ತರಿಗೆ ಪ್ರವೇಶ ದೊರೆಯಲಿದೆ.
ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ವತಿಯಿಂದ ಸಿಬ್ಬಂದಿ ಇಂದು ಸ್ವಚ್ಚತಾ ಕಾರ್ಯ ಕೈಗೊಂಡಿದ್ದಾರೆ. ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ಮೂರು ನದಿಗಳ ಸಂಗಮ ಆಗಿರುವುದರಿಂದ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿತ್ತು. ನಾಳೆ ದೇಗುಲ ಪ್ರಾರಂಭವಾದರೂ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ತ್ರಿವೇಣಿ ಸಂಗಮ ನದಿಯಲ್ಲಿ ಭಕ್ತರು ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ನದಿಯ ದಡದಲ್ಲಿ ಸಿಬ್ಬಂದಿಗಳನ್ನು ಕಾವಲು ಹಾಕಲಾಗಿದೆ. ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಮಾಡಬೇಕು, ಸಾಮಾಜಿಕ ಅಂತರ ಪಾಲಿಸುತ್ತಾ ಸಂಗಮನಾಥನ ದರ್ಶನ ಪಡೆಯಬೇಕು ಎಂದು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಆಯುಕ್ತ ರಘುನಾಥ್ ಎ.ಇ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಚಾಲನಾ ತರಬೇತಿ.. ಸ್ವಾವಲಂಬನೆ ಪಾಠ ಕಲಿಸುತ್ತಿದೆ ಸಿದ್ಧಗಂಗಾ ಮಠ