ಬಾಗಲಕೋಟೆ : ಸುಪ್ರೀಂಕೋರ್ಟ್ ಆದೇಶವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಮಾಜಿ ಸಿಎಂ ಸಿದ್ದರಾಮಯ್ಯ ದಡ್ಡರಾಗಿಬಿಟ್ಟರಾ?. ಕಾಂಗ್ರೆಸ್ ಪಕ್ಷ ಸಂಪೂರ್ಣ ಜಾತಿವಾದಿಯಾಗಿದೆ. ಜಾತಿವಾದಿ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕಾರ ಮಾಡಬೇಕು. ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿವೆ. ಕ್ರಾಂತಿಕಾರಿ ಬದಲಾವಣೆ ತರುವುದಕ್ಕೆ ನಮ್ಮ ಪಕ್ಷ ಹೊರಟಿದೆ. ಭಾರತೀಯ ಸಂಸ್ಕೃತಿಯನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಮುಸ್ಲಿಂ ಸಮಾಜಕ್ಕೆ ಶೇ 4ರಷ್ಟು ಮೀಸಲಾತಿ ರದ್ಧತಿಗೆ ಸುಪ್ರೀಂ ತಡೆ ವಿಚಾರವಾಗಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶವನ್ನ ಅರ್ಥ ಮಾಡಿಕೊಳ್ಳಲಾಗದಷ್ಟು ಸಿದ್ದರಾಮಯ್ಯ ದಡ್ಡರಾ? ಎಂದು ವ್ಯಂಗ್ಯವಾಡಿದರು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದೇಶ ಕೊಟ್ಟಿಲ್ಲ. ನಾವು ಸುಪ್ರೀಂ ಕೋರ್ಟ್ನಲ್ಲಿ ಹೋರಾಡ್ತೇವೆ, ಸಿದ್ದರಾಮಯ್ಯ ಇಂದಲ್ಲ ನಾಳೆ ಜೈಲಿಗೆ ಹೋಗುತ್ತಾರೆ. ಅರ್ಕಾವತಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗುತ್ತಾರೆ. ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.
ಸಿಎಂ ಸೀಟ್ಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಜಾತಿವಾದಿ ಪಕ್ಷವಾಗಿದೆ. ಕಾಂಗ್ರೆಸ್ನವರು ನಮ್ಮನ್ನು ಅಧಿಕಾರಕ್ಕೆ ತನ್ನಿ ಅಂತಾರೆ. ಆದರೆ, ಇವರು ಅಧಿಕಾರಕ್ಕೆ ಬಂದರೆ ಈ ಪಿಎಫ್ಐ ನಿಷೇಧ, ಗೋಹತ್ಯೆ ನಿಷೇಧ ಮೊದಲಾದ ಕಾಯ್ದೆಗಳನ್ನು ವಾಪಸ್ ಜಾರಿ ಮಾಡ್ತಾರೆ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಸೋತರೂ ಬುದ್ಧಿ ಬರಲಿಲ್ಲ" ಎಂದರು.
ಇದನ್ನೂ ಓದಿ : ನಗು ನಗುತ್ತಲೇ ಮುಖಾಮುಖಿಯಾದ ಸಿದ್ದರಾಮಯ್ಯ - ಬೊಮ್ಮಾಯಿ... ವಿಡಿಯೋ ನೋಡಿ
ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ ಸೋಲುತ್ತಿದೆ. ನಮ್ಮಲ್ಲಿ ಸಮರ್ಥ ನಾಯಕತ್ವ, ಸಂಘಟನೆ, ಅಭಿವೃದ್ಧಿ ಕಾರ್ಯಗಳನ್ನ ಮಾಡುವ ಮೂಲಕ ಜನಸಾಮಾನ್ಯರ ಸರ್ಕಾರವಾಗಿದೆ. ಈ ಜಾತಿವಾದಿ ಕಾಂಗ್ರೆಸ್ ಪಕ್ಷವನ್ನ ಸೋಲಿಸಲು ಜನ ನಿರ್ಧರಿಸಿದ್ದಾರೆ. ರಾಷ್ಟ್ರವಾದಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ರಾಜ್ಯದಲ್ಲಿ ಲಿಂಗಾಯತ ಅಸ್ತ್ರ ಪ್ರಯೋಗ ವಿಚಾರವಾಗಿ ಮಾತನಾಡಿ, ಲಿಂಗಾಯತರನ್ನ ಒಡೆದು ಛಿದ್ರ ಮಾಡಿದ ಕಾಂಗ್ರೆಸ್ಗೆ ಬುದ್ದಿ ಕಲಿಸಬೇಕು. ಬಸವಣ್ಣನವರು ಕೇವಲ ವೀರಶೈವ ಲಿಂಗಾಯತರ ನಾಯಕರಲ್ಲ, ಇಡೀ ಮಾನವ ಕುಲಕ್ಕೆ ನಾಯಕರು. ಧರ್ಮವನ್ನು ಒಡೆದ ಬಗ್ಗೆ ಎಲ್ಲರಿಗೂ ತಿಳಿಸುತ್ತಾ ಇದ್ದೇವೆ. ಜಾತಿ ಒಡೆದು ವಿಷ ಬೀಜ ಬಿತ್ತಿದವರು ಕಾಂಗ್ರೆಸ್ಸಿಗರು, ಜನರು ಅವರಿಗೆ ಬುದ್ಧಿ ಕಲಿಸ್ತಾರೆ. ಸಿದ್ದರಾಮಯ್ಯ ಮೊದಲು ಲಿಂಗಾಯತ ಸಿಎಂಗಳು ಭ್ರಷ್ಟರು ಅಂತ ಹೇಳಿದ್ದರು. ಮತ್ತೆ ನಾನು ಬೊಮ್ಮಾಯಿ ಅವರಿಗೆ ಮಾತ್ರ ಹೇಳಿದ್ದು ಅಂತಾರೆ ಎಂದ ಅವರು, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾಮನಗರದಲ್ಲಿ ಘಟಾನುಘಟಿಗಳ ಸ್ಪರ್ಧೆ : ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು!