ಬಾಗಲಕೋಟೆ: ನವನಗರದಲ್ಲಿ ಕಳೆದ ರಾತ್ರಿ (ಬುಧವಾರ) ನಡೆದ ಬಾಲಕಿ ಅಪಹರಣ ಪ್ರಕರಣ ಸುಖ್ಯಾಂತ ಕಂಡಿದೆ. ಆರೋಪಿಗಳು ಆಕೆಯನ್ನ ಸುರಕ್ಷಿತವಾಗಿ ಮನೆ ಮುಂದೆ ಬಿಟ್ಟು ಹೋಗಿದ್ದಾರೆ.
ಟ್ಯೂಷನ್ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಬಾಲಕಿ ಕೃತಿಕಾ ಬಾಡಗಂಡಿ (7)ಯನ್ನು ರಾತ್ರಿ 8 ಗಂಟೆಗೆ ಸಮಯದಲ್ಲಿ ನಾಲ್ವರು ಕಾರಿನಲ್ಲಿ ಬಂದು ಅಪಹರಣ ಮಾಡಿಕೊಂಡು ಹೋಗಿದ್ದರು. ನಂತರ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಬಾಲಕಿ ತಾಯಿ ಸುನಿತಾ ಎಂಬುವವರು ನವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆ ಪೊಲೀಸರು ರಾತ್ರಿಯಿಂದಲೇ ಶೋಧ ಕಾರ್ಯ ನಡೆಸಿದ್ದರು. ಈ ವಿಷಯ ತೀವ್ರ ಚರ್ಚೆ ಆಗುತ್ತಿರುವ ಹಿನ್ನೆಲೆ ಹಾಗೂ ಪೊಲೀಸ್ ಶೋಧ ಕಾರ್ಯ ನಡೆಸುತ್ತಿದ್ದದ್ದು ತಿಳಿದು ಬಂದಿದ್ದರಿಂದ ಬಾಲಕಿಯನ್ನು ಸುರಕ್ಷಿತವಾಗಿ ಇಬ್ಬರು ವ್ಯಕ್ತಿಗಳು ಮನೆಯ ಮುಂದೆ ಬಿಟ್ಟು ಹೋಗಿದ್ದಾರೆ.
ಅಣ್ಣ- ತಂಗಿ ಇಬ್ಬರೂ ಟ್ಯೂಷನ್ಗೆ ಹೋಗಿ ವಾಪಸ್ ಬರುತ್ತಿರುವ ಸಮಯದಲ್ಲಿ ಅವರಿಬ್ಬರನ್ನು ಅಪಹರಣಕಾರರು ಅಡ್ಡಗಟ್ಟಿದ್ದಾರೆ. ನಂತರ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಆಕೆಯ ಅಣ್ಣ ಓಂ ಎಂಬುವವನು ಅವರ ಕಾಲು ಹಿಡಿದಿದ್ದಾನೆ. ಆಗ ಅವರು ಹುಡುಗನಿಗೆ ಕಾಲಿನಿಂದ ಒದ್ದು ಹೋಗಿದ್ದಾರೆ ಎನ್ನಲಾಗಿದೆ.
ಆಹಾರ ಕೊಡದೆ ತೊಂದರೆ
ಚಾಕೊಲೇಟ್ ಆಸೆ ತೋರಿಸಿ, ಮನೆಯ ಮಾಹಿತಿ ಕೇಳುವ ನೆಪದಲ್ಲಿ ಅಪಹರಣ ಮಾಡಿದ್ದಾರೆ. ಬಾಲಕಿಗೆ ರಾತ್ರಿ ಇಡೀ ಬೇರೆ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಆಹಾರ ಕೊಡದೆ ತೊಂದರೆ ಮಾಡಿದ್ದಾರೆ. ಮತ್ತೆ ಅವಾಜ್ ಹಾಕಿದ್ದಾರೆ ಎಂದು ಬಾಲಕಿ ಪೊಲೀಸರ ಮುಂದೆ ತಿಳಿಸಿದ್ದಾಳೆ.
ಹಣಕ್ಕಾಗಿ ಅಪಹರಣ ಮಾಡಿರುವ ಸಂಶಯ
ಬಾಲಕಿ ಮನೆಗೆ ಬಂದ ನಂತರ ಪೊಲೀಸರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಎಲ್ಲವನ್ನೂ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಈ ಅಪಹರಣ ಪ್ರಕರಣವನ್ನು ಸಂಬಂಧಿಕರೇ ಹಣಕ್ಕಾಗಿ ಸೃಷ್ಟಿ ಮಾಡಿದ್ದಾರೆ ಎಂಬ ಸಂಶಯ ಮೂಡಿಸಿದೆ.
ಅಪಹರಣಕಾರರು ಬಾಲಕಿ ತಂದೆಗೆ ಪರಿಚಿತರು
ಬಾಲಕಿಯ ಸಹೋದರ ಮಾವ ಜೂಜಾಟದಿಂದ ಸಾಕಷ್ಟು ನಷ್ಟ ಮಾಡಿಕೊಂಡು ಸಾಲ ಮಾಡಿಕೊಂಡಿದ್ದಾನೆ. ಹೀಗಾಗಿ, 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವುದು ಸಂಶಯ ಮೂಡಿಸಿದೆ. ಅಪಹರಣಕಾರರು ಬಾಲಕಿ ತಂದೆಗೆ ಪರಿಚಿತರು ಎನ್ನಲಾಗಿದೆ.
ಬಂಧನಕ್ಕೆ ಶೋಧ ಕಾರ್ಯ
ಆರೋಪಿಗಳು ಗದ್ದನಕೇರಿಯವರು ಎನ್ನಲಾಗಿದೆ. ಈಗಾಗಲೇ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಉಳಿದ ಮೂವರು ನಾಪತ್ತೆ ಆಗಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ. ಒಟ್ಟಿನಲ್ಲಿ ಬಾಲಕಿ ಅಪಹರಣ ಪ್ರಕರಣ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.