ಬಾಗಲಕೋಟೆ: ಜಿಲ್ಲೆಯಾದ್ಯಂತ ಬಿಸಿಲಿನ ಕಾವು ಜೋರಾಗುತ್ತಿದ್ದಂತೆ ಸಾಹಿತ್ಯ ಪರಿಷತ್ತಿನ ಚುನಾವಣೆ ಕಾವು ಸಹ ಜೋರಾಗುತ್ತಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಮೂರು ಜನ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಸಾಹಿತಿ, ಬರಹಗಾರ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಜೆ.ಕೆ.ತಳವಾರ ಹಾಗೂ ಸಾಹಿತಿ ಆಗಿರುವ ಶಿವಾನಂದ ಶೆಲ್ಲಿಕೇರಿ ಮಧ್ಯೆ ಪರಸ್ಪರ ಪೈಪೋಟಿ ಏರ್ಪಟ್ಟಿದೆ. ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಬಲಾಬಲ ಪ್ರದರ್ಶನ ಮಾಡಿದ್ದಾರೆ.
ಹಿರಿಯ ಸಾಹಿತಿಗಳು, ಚಿಂತಕರು ಜೆ.ಕೆ.ತಳವಾರ ಪರವಾಗಿ ಇದ್ದರೆ, ಕನ್ನಡಪರ ಸಂಘಟನೆಯವರು, ಮಹಿಳಾ ಸಾಹಿತಿಗಳು ಹಾಗೂ ಬರಹಗಾರರು ಶಿವಾನಂದ ಶೆಲ್ಲಿಕೇರಿ ಪರವಾಗಿ ಇದ್ದಾರೆ.
ಸಾಹಿತ್ಯ ಪರಿಷತ್ ಹಿಂದಿನ ಜಿಲ್ಲಾಧ್ಯಕ್ಷರಾದ ಶ್ರೀಶೈಲ ಕರಿಶಂಕರಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವಾಗ ಹಾಜರಾಗಿ ತಮ್ಮದೇ ಕಾರ್ಯತಂತ್ರ ನಿರೂಪಿಸಿದ್ದಾರೆ. ಸಾಹಿತ್ಯಕ್ಕೂ ಜಾತಿಯ ನಂಟು ಇಲ್ಲವಾದರೂ ಒಳ ಒಳಗೆ ಜಾತಿಯ ವಾಸನೆ ಬರುತ್ತಿದೆ.
ಜೆ.ಕೆ.ತಳವಾರ ಹಿಂದುಳಿದ ಜನಾಂಗ ವಾಲ್ಮೀಕಿಯ ಸಮುದಾಯದವರು ಆಗಿದ್ದಾರೆ. ಶಿವಾನಂದ ಶೆಲ್ಲಿಕೇರಿ ಲಿಂಗಾಯತ ಜನಾಂಗದ ಬಣಜಿಗ ಪಂಗಡದವರು. ಇನ್ನೋರ್ವ ಅಭ್ಯರ್ಥಿ ಮಹಾಂತೇಶ ಗಜೇಂದ್ರಗಡ ಸಹ ಲಿಂಗಾಯತ ಸಮುದಾಯವರಾಗಿದ್ದು, ಸರಳ ವ್ಯಕ್ತಿ ಆಗಿದ್ದರಿಂದ ನಾಮಪತ್ರ ಸಲ್ಲಿಸುವ ವೇಳೆ ಅದ್ಧೂರಿಯಾಗಿ ಮಾಡದೆ, ಸರಳವಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಈಗ ಯಾವುದೇ ಚುನಾವಣೆ ನಡೆದರೂ ದುಂದು ವೆಚ್ಚ ಮಾಡದೆ ಚುನಾವಣೆ ನಡೆಯುವುದು ಸಾಧ್ಯವೇ ಇಲ್ಲಾ ಎಂಬಂತಾಗಿದೆ. ಜಾತಿ, ಹಣ ಹಾಗೂ ಪಾರ್ಟಿಗಳ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಮಾಡಲಾಗುತ್ತದೆ.
ಮೇ 9ರಂದು ಜಿಲ್ಲಾ ಮಟ್ಟದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಮಟ್ಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯಾರಿಗೆ ಜಯ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ.