ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ಪಟ್ಟಣದ ರಸ್ತೆಗಳಲ್ಲಿ ಏನು ಅರಿಯದ ಮುಗ್ದೆಯಂತೆ ಸಂಚಾರ ಮಾಡುತ್ತಿದ್ದ ಮಾನಸಿಕ ಅಸ್ವಸ್ಥಗೊಂಡ ಮಹಿಳೆಯನ್ನು ರಕ್ಷಿಸಿ, ಅವರ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಿ ಮುಟ್ಟಿಸುವ ಮೂಲಕ ಜೆಡಿಎಸ್ ಪಕ್ಷದ ನಾಯಕಿ ಜಯಶ್ರೀ ಸಾಲಿಮಠ ಮಾನವೀಯತೆ ಮರೆದಿದ್ದಾರೆ.
ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಮಾನಸಿಕ ಅಸ್ವಸ್ಥತೆಗೊಂಡ ಮಹಿಳೆಯು ಬಸ್ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಂಚರಿಸುತ್ತಾ ರಸ್ತೆ ಬದಿಯಲ್ಲಿ ಕುಳಿತುಕೊಳ್ಳುತ್ತಿದ್ದಳು. ಕೊರೊನಾ ಭೀತಿಯಿಂದಾಗಿ ಇವಳ ಬಗ್ಗೆ ಯಾರೂ ಗಮನ ಹರಿಸದೇ, ದೂರುವೇ ಇರುತ್ತಿದ್ದರು. ಈ ಬಗ್ಗೆ ಜಯಶ್ರೀ ಸಾಲಿಮಠ ಅವರ ಗಮನಕ್ಕೆ ಬಂದಾಗ, ಪೊಲೀಸರ ಸಹಾಯದಿಂದ ಈ ಮಹಿಳೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಮುದಗಲ್ ತಾಲೂಕಿನ ಬನ್ನಿಗೋಳ ಗ್ರಾಮದ ಬಸಮ್ಮ ಎಂಬ 48 ವರ್ಷ ಮಹಿಳೆ ಈಕೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ, ಜಯಶ್ರೀ ಸಾಲಿಮಠ ಅವರು, ಸ್ವಂತ ಖರ್ಚಿನಲ್ಲಿ ಆ್ಯಂಬುಲೆನ್ಸ್ ಮೂಲಕ ಮಹಿಳೆಯ ಊರಿಗೆ ತೆರಳಿ ಕುಟುಂಬದವರಿಗೆ ಮುಟ್ಟಿಸಿದ್ದಾರೆ.
ಈ ಮಹಿಳೆಯ ಮಕ್ಕಳು, ಗಂಡ ಇದ್ದರೂ ಮಾನಸಿಕ ಅಸ್ವಸ್ಥತೆ ಈಕೆ ಎಂಬ ಕಾರಣಕ್ಕೆ ಕಾಳಜಿ ಮಾಡುತ್ತಿರಲಿಲ್ಲ. ಈ ಮಹಿಳೆಯನ್ನು ಕರೆದುಕೊಂಡು ಹೋದಾಗ ಮನೆಯೊಳಗೆ ಕರೆದುಕೊಳ್ಳದೇ ನೀವೇ ವಾಪಸ್ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಆಗ ಪೊಲೀಸರಿಗೆ ದೂರು ನೀಡುವುದಾಗಿ ಭಯ ಮೂಡಿಸದ ನಂತರ ಸುಮ್ಮನಾಗಿ ಆಕೆಯನ್ನು ಮನೆಯೊಳಗೆ ಸೇರಿಸಿಕೊಂಡಿದ್ದಾರೆ.