ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಬಾದಾಮಿ ಬನಶಂಕರಿ ದೇವಾಲಯದ ಜಾತ್ರಾ ಮಹೋತ್ಸವವನ್ನು ಕೊರೊನಾ ಹಿನ್ನೆಲೆ ಈ ಬಾರಿ ಜಿಲ್ಲಾಡಳಿತ ನಿಷೇಧ ಮಾಡಿದೆ. ಜಾತ್ರೆಯಲ್ಲಿ ಪ್ರಮುಖ ಮನರಂಜನೆಯಾಗಿ ನಾಟಕ ಕಂಪನಿಗಳು ಇರುತ್ತಿದ್ದು, ಕಲಾವಿದರಿಗೆ ಉಪ ಜೀವನಕ್ಕೆ ಈ ಜಾತ್ರೆಯು ವರದಾನವಾಗಿತ್ತು. ಆದರೆ ಈ ವರ್ಷ ಜಾತ್ರೆ ನಿಷೇಧ ಮಾಡಿರುವುದರಿಂದ ನಾಟಕ ಕಲಾವಿದರು ಕಂಗಲಾಗಿದ್ದಾರೆ.
ನೂರಾರು ಕಲಾವಿದರು, ಗೇಟ್ ಕಿಪರ್, ಲೈಟ್ ಮನ್, ಸಂಗೀತಗಾರರ ಕುಟುಂಬ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಜಾತ್ರೆ ನಿಷೇಧ ಮಾಡಿರುವುದಕ್ಕೆ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ಸಮಾವೇಶ ಮಾಡಿ ಸಾವಿರಾರು ಜನರು ಒಂದೆಡೆ ಸೇರುವುದಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ ಕಲಾವಿದರ ಹೊಟ್ಟೆ ಮೇಲೆ ಕೋಪವೇಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ-ರಾಜ್ಯ ಸರ್ಕಾರಗಳ ಕಾಯ್ದೆಗಳಿಗೆ ನಮ್ಮ ವಿರೋಧವಿದೆ: ಹೆಚ್.ಡಿ.ರೇವಣ್ಣ
ಕೊರೊನಾ ರೋಗದಿಂದ ನಾಟಕ ಕಂಪನಿಗಳು ಸ್ಥಗಿತಗೊಂಡು ಉಪ ಜೀವನಕ್ಕಾಗಿ ಕಲಾವಿದರು ತೀವ್ರ ತೊಂದರೆ ಅನುಭವಿಸಿದ್ದಾರೆ. ಈಗ ಮನರಂಜನೆಗೆ ಸಿನಿಮಾ, ನಾಟಕ ಕಂಪನಿಗಳ ಪ್ರಾರಂಭಕ್ಕೆ ಅವಕಾಶ ನೀಡಲಾಗಿದೆ. ಆದರೆ ಜಾತ್ರೆಗಳಲ್ಲಿ ನಿಷೇಧ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ಎದುರಾಗಿದೆ ಎಂದು ಕಲಾವಿದರು ದೂರಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿಯೇ ಬನಶಂಕರಿ ಜಾತ್ರೆ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ಒತ್ತಡ ತಂದು ಜಾತ್ರೆಗೆ ಅನುವು ಮಾಡಿಕೊಟ್ಟು, ಕಲಾವಿದರಿಗೆ ಸಹಾಯ ಮಾಡಿಕೂಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹೊಸ ವರ್ಷದಲ್ಲಿ ಮೊದಲು ಜಾತ್ರೆಯು ಬನಶಂಕರಿ ದೇವಾಲಯದಿಂದ ಪ್ರಾರಂಭ ಆಗುತ್ತೆ. ಈ ಜಾತ್ರೆ ನಂತರ ಪ್ರಮುಖ ಜಾತ್ರೆಗಳು ಬರುತ್ತವೆ. ಎಲ್ಲ ಜಾತ್ರೆಗಳನ್ನೂ ನಿಷೇಧ ಮಾಡಿದರೆ ಕಲಾವಿದರು ಕೊರೊನಾದಿಂದ ಸಾಯುವುದಿಲ್ಲ, ಬದಲಾಗಿ ದುಡಿಮೆ ಇಲ್ಲದೆ ಪ್ರಾಣ ಬಿಡುವಂತಹ ಸ್ಥಿತಿ ಬರುತ್ತದೆ. ಆದ್ದರಿಂದ ಸಚಿವರು, ಅಧಿಕಾರಿಗಳು ಗಮನ ಹರಿಸಿ, ಜಾತ್ರೆ ನಿಷೇಧ ಮಾಡದೆ ನಾಟಕ ಕಂಪನಿಗಳಿಗೂ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.