ಬಾಗಲಕೋಟೆ: ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು, ಜಮಖಂಡಿ ಪೊಲೀಸರು ಬಂಧಿಸಿದ್ದಾರೆ. ನ್ಯೂಸ್ 29 ಎಂಬ ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಹಪ್ತಾ ವಸೂಲಿ ಸೇರಿದಂತೆ , ರೈತರು ಒಯ್ಯುತ್ತಿರುವ ಮರಳು ವಾಹನ ತಡೆ ಹಿಡಿದು ಹಣ ವಸೂಲಿ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿನ್ನಲೆ ನಕಲಿ ಪತ್ರಕರ್ತನ ಬಂಧನವಾಗಿದೆ.
ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ನಿವಾಸಿ ರಮೇಶ ನಾಗಪ್ಪಗೋಳ ಎಂಬ ನಕಲಿ ಪತ್ರಕರ್ತನನ್ನು ಕಾರು ಸಮೇತ ಅರೆಸ್ಟ್ ಮಾಡಲಾಗಿದ್ದು, ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಱನ್ 384, 419 ಹಾಗೂ 420 ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ.
ಆರೋಪಿ ಹೆಸರಿಗೆ ವಾರ ಪತ್ರಿಕೆ ಇಟ್ಟುಕೊಂಡು ಜಿಲ್ಲೆಯ ವಿವಿಧ ಕಚೇರಿಗೆ ತೆರಳಿ ಹಫ್ತಾ ವಸೂಲಿ ಮಾಡುತ್ತಿದ್ದ. ಜೊತೆಗೆ ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಕಚೇರಿಯ ಮಹಿಳಾ ಸಿಬ್ಬಂದಿ ಬಗ್ಗೆ ವೈಯಕ್ತಿಕ ವಿಷಯಗಳ ಬಗ್ಗೆ ತಿಳಿಯಲು ಮಾಹಿತಿ ಹಕ್ಕು ಅಡಿ ಅರ್ಜಿ ನೀಡಿ, ಹಣ ವಸೂಲಿ ಮಾಡುತ್ತಿದ್ದ. ಈತನ ಬಗ್ಗೆ ಅಧಿಕಾರಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತ ವಾಗಿತ್ತು.
ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮದ ಗದಿಗೆಪ್ಪ ಧಾರವಾಡ ಎಂಬುವವರಿಗೆ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಕೊನೆಗೆ ಐದು ಸಾವಿರ ಕೇಳಿ, ಇಲ್ಲವಾದಲ್ಲಿ ಕಾರು ತಂದಿರುವುದಕ್ಕೆ ಡೀಸೆಲ್ ಹಾಕಿಕೊಳ್ಳಲು ಹಣ ನೀಡುವಂತೆ ಪೀಡಿಸಿದ್ದ ವಿಡಿಯೋ ವೈರಲ್ ಆಗಿತ್ತು.
ಹಣ ಪೀಡಿಸಿದಕ್ಕೆ ಬೇಸತ್ತು ರೈತ ದೂರು ನೀಡಿದ ಹಿನ್ನೆಲೆ, ನಕಲಿ ಪತ್ರಕರ್ತನನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಕಿರಿ ಕಿರಿ ಉಂಟಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.