ಬಾಗಲಕೋಟೆ: ಕಠಿಣ ಪರಿಶ್ರಮದ ಅಧ್ಯಯನದಿಂದ ಮಾತ್ರ ಜೀವನದ ಯಶಸ್ಸಿನ ದಾರಿ ಮುಟ್ಟಲು ಸಾಧ್ಯವೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಹೇಳಿದರು.
ನವನಗರದ ಡಾ. ಬಿ. ಆರ್. ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರದಲ್ಲಿ ವಸತಿ ನಿಲಯಗಳ ಪದವಿ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ತಾರತಮ್ಯದ ಉತ್ತೀರ್ಣತೆ ಸಾಧ್ಯವಿಲ್ಲ. ಯೋಗ್ಯತೆ ಇದ್ದವರು ಮಾತ್ರ ಉತ್ತಮ ಸ್ಥಾನ ಪಡೆಯಲು ಸಾಧ್ಯ. ಸರ್ಕಾರಿ ಕೆಲಸ ದೇವರ ಕೆಲಸ ಇದ್ದಂತೆ. ಅದಕ್ಕೆ ಗೌರವ ಸಲ್ಲಿಸುವುದು ಅಧಿಕಾರಿಗಳಾದ ನಮ್ಮ ಕರ್ತವ್ಯವಾಗಿದೆ. ಬಡಕುಟುಂಬದಲ್ಲಿ ಜನಸಿದ ಎಷ್ಟೋ ಪ್ರತಿಭೆಗಳು ಇಂದು ಭಾರತ ದೇಶದ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ. ಅಂತಹ ಕಾರ್ಯಗಳನ್ನು ಮುಂಬರುವ ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಮಾತನಾಡಿ, ದೃಢ ನಿರ್ಧಾರದಿಂದ ಸದೃಢ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಇಂದಿನಿಂದಲೇ ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಹರಿಸಬೇಕು. ಶ್ರಮವಹಿಸಿ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಹೆಸರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಷ್ಟಪಟ್ಟು ಓದುವ ಎಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಇಂತಹ ಕಾರ್ಯಾಗಾರಗಳು ಸ್ಫೂರ್ತಿಯಾಗುತ್ತವೆ ಎಂದು ಹೇಳಿದರು.
ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ ಮಾತನಾಡಿ, ನಾವು ಕಾಣುವ ಕನಸು ನಮ್ಮ ಜೀವನದ ಗುರಿಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಹೊಂದಲು ಹಗಲಿರುಳು ಪ್ರಯತ್ನಿಸಬೇಕು. ಯಾವುದೇ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಬೇಕಾದರೆ ಚಿಕ್ಕ ವಯಸ್ಸಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.