ಬಾಗಲಕೋಟೆ : ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ಯುವ ರೈತ ಮುಖಂಡ ಯಲ್ಲಪ್ಪ ಹೆಗಡೆ ಅವರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸಾಂತ್ವನ ಹೇಳಿದರು. ಬಳಿಕ, ಅವರಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಬಿಜೆಪಿಯ ದೊಡ್ಡ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇದೆ. ಸದ್ಯಕ್ಕೆ ನಾನು ಅದನ್ನು ಹೇಳುವುದಿಲ್ಲ, ಅವರು ಬರ್ತಾರೆ, ಬರಲಿ. ಎಷ್ಟು ಜನ ಬರ್ತಾರೆ ಎನ್ನುವ ಸಂಖ್ಯೆ ನಿಖರವಾಗಿಲ್ಲ. ಆದರೆ ಬರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : Santhosh Lad : ಮುನೇನಕೊಪ್ಪ, ಚಿಕ್ಕನಗೌಡರು ಬರಬಹುದೆಂಬ ಮಾಹಿತಿ ಇದೆ ಅಂತಾ ನಾನು ಹೇಳಿದ್ದೆ; ಲಾಡ್ ಸ್ಪಷ್ಟನೆ
ಕೆಲ ನಾಯಕರು ಸಿಎಂ ಅವರನ್ನು ಭೇಟಿ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ. ಹೀಗಾಗಿ, ಅವರನ್ನು ಭೇಟಿ ಮಾಡಿ ಕ್ಷೇತ್ರದ ಕೆಲಸಗಳ ಕುರಿತಂತೆ ಮನವಿ ಕೊಡುವುದಕ್ಕೆ ಬರ್ತಾರೆ. ಬರಬೇಡ ಎನ್ನುವುದಕ್ಕೆ ಆಗುತ್ತದಾ? ಎಂದರು. ನಂತರ ಬಿಜೆಪಿಗರ ಚಾರ್ಜ್ಶೀಟ್ ಬಿಡುಗಡೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಅವರಿಗೆ ಬೇರೆ ಕೆಲಸವಿಲ್ಲ, ಐದು ವರ್ಷ ಯಾವುದೇ ಯೋಜನೆ ಮಾಡಿಲ್ಲ, ಬಿಜೆಪಿಗರ ಮಾತಿಗೆ ಜನ ಬೆಲೆ ಕೊಡುವುದಿಲ್ಲ. ಬಿಜೆಪಿ ಪಕ್ಷ ದಿವಾಳಿಯಾಗಿದೆ. ರಾಜ್ಯವನ್ನು ದಿವಾಳಿ ಮಾಡಿ ಹೋದವರ ಮಾತಿಗೆ ಬೆಲೆ ಕೊಡುವುಕ್ಕೆ ಆಗುತ್ತಾ? ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ನನಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಬಂದಿಲ್ಲ: ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ.. ಮುನೇನಕೊಪ್ಪ ಸ್ಪಷ್ಟನೆ
ಕೇಂದ್ರದ ನಾಯಕರು ರಾಜ್ಯ ಬಿಜೆಪಿ ನಾಯಕರನ್ನು ತಿರುಗಿ ನೋಡುತ್ತಿಲ್ಲ. ರಾಜ್ಯವನ್ನು ಬಿಜೆಪಿಗರು ದಿವಾಳಿ ಮಾಡಿದ್ದಾರೆ ಎಂದೇ ಕೇಂದ್ರದ ನಾಯಕರು ಇವರನ್ನು ತಿರುಗಿ ನೋಡುತ್ತಿಲ್ಲ. ಇನ್ನು ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಇದೇ ಸಮಯದಲ್ಲಿ ರೈತ ಮುಖಂಡ ಯಲ್ಲಪ್ಪ ಹೆಗಡೆ ಅವರ ಮೇಲಿನ ಮಾರಣಾಂತಿಕ ಹಲ್ಲೆ ವಿಚಾರವಾಗಿ ಮಾತನಾಡಿ, ಈ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಪೊಲೀಸರು ಆರು ಜನರನ್ನು ಬಂಧಿಸಿಸಿದ್ದಾರೆ, ತನಿಖೆ ನಡೆಯುತ್ತಿದೆ. ಎಷ್ಟೇ ಪ್ರಭಾವಿಯಾಗಿರಲಿ ಅವರನ್ನು ಮಟ್ಟ ಹಾಕುತ್ತೇವೆ. ಹೋರಾಟಗಾರರ ಜೀವಕ್ಕೆ ಬೆದರಿಕೆ ಬರಲಾರದ ರೀತಿಯಲ್ಲಿ ಸರ್ಕಾರ ನಡೆಸಿಕೊಳ್ಳುತ್ತದೆ, ಯಾರು ಕೊಲೆ ಯತ್ನಕ್ಕೆ ಪ್ರಯತ್ನಿಸುತ್ತಿದ್ದಾರೋ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಫೋನ್ ಕಾಲ್ ರೆಕಾರ್ಡ್ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಪೊಲೀಸ್ ತನಿಖೆ ಮುಂದುವರೆದಿದ್ದು, ಈ ಘಟನೆಯನ್ನು ನಾವು ಸಹಿಸುವುದಿಲ್ಲ, ಹಲ್ಲೆ ಮಾಡಿದ ಆರೋಪಿಗಳು ನಿರಾಣಿ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದವರಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರು : ಬೊಗಳಿದ ನಾಯಿಯ ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ.. ಆರೋಪಿ ಬಂಧನ