ಬಾಗಲಕೋಟೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಹೋಳಿ ಹಬ್ಬದಲ್ಲೂ ರಾಜಕೀಯದ ಬಣ್ಣ ಎರಚಲಾಗುತ್ತಿದೆ. ಕೇಂದ್ರ ಸರ್ಕಾರ ಕರೆ ನೀಡಿದ್ದ ಸರಳ ಆಚರಣೆಯನ್ನು ಲೆಕ್ಕಿಸದೆ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದ್ದಾರೆ.
ಈ ಬಾರಿ ಕೊರೊನಾ ವೈರಸ್ ಭೀತಿ ಇರುವ ಹಿನ್ನೆಲೆ ಸರಳವಾಗಿ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಆದರೆ, ಕಾಂಗ್ರೆಸ್ ಇದನ್ನು ವಿರೋಧಿಸಿ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದೆ. ಕಾಂಗ್ರೆಸ್ನ ಶಾಸಕರು ಮತ್ತು ಮುಖಂಡರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಜಮಖಂಡಿಯಲ್ಲಿ ಅದ್ಧೂರಿ ಹೋಳಿ: ಜಮಖಂಡಿ ಪಟ್ಟಣದಲ್ಲೂ ಈ ಬಾರಿ ಹೋಳಿ ಉತ್ಸವ ಕಳೆಗಟ್ಟಿತ್ತು. ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಅವರು ತಾಲೂಕು ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಡಿಜೆ ಸಂಗೀತ ಹಾಕಿಸಿ ಕುಣಿದು ಕುಪ್ಪಳಿಸಿದರು. ಇದಕ್ಕೂ ಮುನ್ನ ಹಲಗೆ ಮೇಳಕ್ಕೆ ನ್ಯಾಮಗೌಡ ಚಾಲನೆ ನೀಡಿದ್ರು.
ಸಾಕಷ್ಟು ಸಂಖ್ಯೆಯಲ್ಲಿ ಯುವಕರು, ಯುವತಿಯರು ಹಾಗೂ ಹಿರಿಯರು ರಂಗೀನ ಆಟದಲ್ಲಿ ಹುಚ್ಚೆದ್ದು ಕುಣಿದರು. ಅಷ್ಟೇ ಅಲ್ಲದೆ, ಜಿಲ್ಲೆಯ ಇಳಕಲ್ನಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಗಡಿಗೆ ಒಡೆಯುವ ಆಟ, ಡಿಜೆ ಸಂಗೀತ ಎಲ್ಲರ ಗಮನ ಸೆಳೆಯಿತು. ಆದರೆ, ಜಿಲ್ಲಾ ಬಿಜೆಪಿ ನಾಯಕರು ಸರಳವಾಗಿ ಬಣ್ಣದ ಹಬ್ಬವನ್ನು ಆಚರಿಸಿದ್ದಾರೆ.