ಬಾಗಲಕೋಟೆ: ಕಲಾದಗಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬ್ರಿಟಿಷರ ಗೋರಿಗಳು ಹಾಳಾಗುತ್ತಿವೆ. ಸರಿಯಾದ ಸಂರಕ್ಷಣೆ ಇಲ್ಲದೆ ಅನೈತಿಕ ಚಟುವಟಿಕೆ ತಾಣವಾಗುತ್ತಿವೆ.
ಸುಮಾರು 200 ವರ್ಷಗಳ ಹಿಂದೆ ಈ ಗ್ರಾಮವನ್ನು ಬ್ರಿಟಿಷರು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ಆಡಳಿತ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮೃತಪಟ್ಟ ಬ್ರಿಟಿಷ್ ಪ್ರಜೆಗಳನ್ನು ಗ್ರಾಮದ ಹೊರ ವಲಯದಲ್ಲಿ ಅಂತ್ಯಕ್ರಿಯೆ ಮಾಡಿ, ಅದರ ಮೇಲೆ ಹೆಸರು, ವರ್ಷ ಮತ್ತು ಮೃತ ಪಟ್ಟವರ ವಯಸ್ಸು ನಮೂದಿಸಲಾಗಿದೆ. ಈ ರೀತಿಯ ಸುಮಾರು 64 ಗೋರಿಗಳು ಇಲ್ಲಿದ್ದು, ಅವುಗಳ ಸಂರಕ್ಷಣೆ ಮಾಡದೆ ಹಾಳಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಗೋರಿಗಳ ಸುತ್ತ ಮುಳ್ಳಿನ ಗಂಟಿ ಬೆಳೆದಿವೆ. ಸ್ವಚ್ಛತೆ ಇಲ್ಲದೆ, ಸಂರಕ್ಷಣೆ ಮಾಡದೆ ಇರುವುದರಿಂದ ಗೋರಿಗಳು ಹಾಳಾಗಿವೆ. ಬ್ರಿಟಿಷರ ಕಾಲದಲ್ಲಿ ಒಂದೊಂದು ಗೋರಿಗಳನ್ನು ಬೇರೆಬೇರೆ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಬಾಲ್ಯದಲ್ಲೇ ಮೃತಪಟ್ಟವರು ಇದ್ದಾರೆ. 17 ತಿಂಗಳ ಮಗುವಿನಿಂದ ಹಿಡಿದು 43 ವಯಸ್ಸಿನವರವರೆಗೂ ಮೃತ ಪಟ್ಟಿರುವ ಬಗ್ಗೆ ಮಾಹಿತಿ ಈ ಗೋರಿಗಳ ಮೇಲಿದೆ. ಅಷ್ಟೆ ಅಲ್ಲದೇ ಪ್ರೀತಿಯ ಶ್ವಾನ ಮೃತಪಟ್ಟಿರುವ ಸಮಯದಲ್ಲಿ ಅದರ ನೆನೆಪಿಗಾಗಿ ಗೋರಿಗಳ ನಿರ್ಮಾಣ ಮಾಡಲಾಗಿದೆ.
ದೇಶದ ಇತಿಹಾಸ ಸಾರುವ ಈ ಗೋರಿಗಳ ಮೇಲೆ ಕೆತ್ತನೆ ಮಾಡಿರುವ ಕಲ್ಲುಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಜನಸಂದಣಿ ಇಲ್ಲದ ಕಾರಣ ಜೂಟಾಟದಂತಹ ಅನೈತಿಕ ಚಟುವಟಿಕೆಗಳಿಗೆ ಈ ಗೋರಿಗಳು ತಾಣವಾಗುತ್ತಿವೆ. ಈ ಬಗ್ಗೆ ಪುರಾತತ್ವ ಇಲಾಖೆಯವರು ಗಮನ ಹರಿಸಿ, ಸಂರಕ್ಷಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.