ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಗ್ರಾಮಗಳಲ್ಲಿನ ಮಣ್ಣಿನ ಗೋಡೆಗಳು ಜಖಂ ಆಗಿವೆ. ಕೇವಲ ಎರಡು ದಿನದ ಜಡಿಮಳೆಗೆ ಅಂದಾಜು 700 ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ.
ಗುಳೇದಗುಡ್ಡ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ, ಸುಮಾರು 400 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಹಾಗೆಯೇ, ಬಾದಾಮಿ ತಾಲೂಕಿನಲ್ಲಿ ಸುಮಾರು 158 ಮನೆಗಳು ಬಿದ್ದಿವೆ ಎಂದು ಅಂದಾಜಿಸಲಾಗಿದ್ದು, ಇಳಕಲ್ ಹಾಗೂ ಹುನಗುಂದ ತಾಲೂಕುಗಳಲ್ಲಿ 107 ಮನೆಗಳು ನೆಲಕ್ಕುರುಳಿರುವ ಮಾಹಿತಿ ಇದೆ.
ಇಂದಿಗೂ ಹಲವು ಗ್ರಾಮೀಣ ಭಾಗದ ಜನರು ಮಣ್ಣಿನ ಗೋಡೆಯ ಮನೆಯಲ್ಲೇ ವಾಸ ಮಾಡುತ್ತಿದ್ದು, ಅಸುರಕ್ಷಿತ ವಾತಾವರಣದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಅನಾಹುತಗಳು ಸಂಭವಿಸಿದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶಿತರಾಗಿರುವ ಜನರು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.