ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರುಣನ ಅರ್ಭಟ ಮುಂದುವರೆದಿದ್ದು ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಬಾದಾಮಿ ತಾಲೂಕಿನಲ್ಲಿ ಸಹ ಸಾಕಷ್ಟು ಮಳೆಯಾದ ಪರಿಣಾಮ ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಸ್ಥಳೀಯರು ಪರದಾಡುವಂತಾಗಿದೆ.
ಭಾರಿ ಮಳೆಯಿಂದಾಗಿ ಯಂಕಂಚಿ, ಮಣಿನಾಗರ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬಾದಾಮಿ-ಕೆರೂರು ಸಂಚಾರ ಬಂದ್ ಆಗಿದೆ. ರಭಸವಾಗಿ ಹರಿಯುತ್ತಿರುವ ನೀರಿನಲ್ಲೇ ಯುವಕರು ಹುಚ್ಚು ಸಾಹಸ ಮಾಡುತ್ತಿರುವ ದ್ರಶ್ಯಗಳು ಕಂಡುಬರುತ್ತಿವೆ. ಹಳ್ಳ ತುಂಬಿ ರಸ್ತೆ ಮಾರ್ಗದ ಸೇತುವೆ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದರೂ ಸ್ಥಳೀಯರು ನಡೆದುಕೊಂಡು ಬರುವುದು, ಬೈಕ್ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಬೇಡ ಎಂದ್ರೂ ಯುವಕನೊಬ್ಬ ಬೈಕ್ನಲ್ಲಿ ಹೋಗಿ ಸೇತುವೆ ಮಧ್ಯೆ ಸಿಲುಕಿಕೊಂಡು ಮುಂದಕ್ಕೆ ಹೋಗಲಾಗದೇ ಪರದಾಡಿದ ಘಟನೆ ನಡೆಯಿತು. ನಂತರ ದಡದಲ್ಲಿದ್ದ ಇಬ್ಬರು ಯುವಕರು ಓಡಿ ಹೋಗಿ ಬೈಕ್ ಎಳೆದುಕೊಂಡು ಬಂದು ಯುವಕನನ್ನು ರಕ್ಷಿಸಿದರು.
ಮನೆಗೆ ನುಗ್ಗಿದ ಮಳೆ ನೀರು: ಈ ಮಧ್ಯೆ ಗೋವಕೊಪ್ಪ, ಕುಳಗೇರಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರ ಹಾಕುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಗುಡಿಸಲು ಹಾಗೂ ತಗಡಿನ ಶೆಡ್ನಲ್ಲಿ ವಾಸ ಮಾಡುತ್ತಿರುವ ಜನ ರಾತ್ರಿ ಇಡೀ ನಿದ್ದೆ ಇಲ್ಲದೆ, ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಜೊತೆಗೆ ಚಿಮ್ಮನಕಟ್ಟಿ ಗ್ರಾಮ ಶಾಲೆಯ ಆವರಣದಲ್ಲಿ ನೀರು ನುಗ್ಗಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.
ಈ ಕುರಿತು ಸ್ಥಳಕ್ಕೆ ಪಿಡಿಒ ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ತಾಲೂಕಿನಲ್ಲಿ ಭಾರಿ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರಧನ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಎದುರಾದ ಪ್ರವಾಹ ಭೀತಿ