ಬಾಗಲಕೋಟೆ: ಸಾಧಿಸುವ ಛಲವೊಂದಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿನ ವಿಶೇಷ ಚೇತನ ವ್ಯಕ್ತಿವೋರ್ವರು ಸಾಕ್ಷಿಯಾಗಿದ್ದಾರೆ. ಹುಟ್ಟಿನಿಂದ ದೃಷ್ಟಿ ದೋಷ ಹೊಂದಿದ್ದರೂ ಸಹ ಕೇಂದ್ರ ಸರ್ಕಾರದ ಹುದ್ದೆ ಪಡೆದುಕೊಂಡು, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಉಪ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ಜಿಲ್ಲೆಯ ರಬಕವಿ ಬನಹಟ್ಟಿ ನಗರದ ಕೆಎಚ್ಡಿಸಿ ಕಾಲೋನಿ ನಿವಾಸಿ ವಿನಾಯಕ ಎಂ. ಶೀಲವಂತರ ಎಂಬುವರು ಕಂಪ್ಯೂಟರ್, ಮೊಬೈಲ್ ನಿರ್ವಹಣೆ ಮಾಡುತ್ತಾರೆ. ಯಾವುದೇ ವಿಷಯವನ್ನು ಸ್ಥಳೀಯರು ಬಂದು ಕೇಳಿದಾಗ ಸೂಕ್ತ ಮಾಹಿತಿ ಒದಗಿಸುತ್ತಾರೆ. ಧ್ವನಿ ಆಧಾರದ ಮೇಲೆ ವ್ಯಕ್ತಿಗಳ ಜೊತೆ ಮಾತನಾಡುತ್ತಾರೆ.
ಇದನ್ನು ಓದಿ: ಅಂತರಿಕ್ಷಯಾನ ಕೈಗೊಳ್ಳಲಿರುವ ಶ್ರೀಷಾ ಬಾಂದ್ಲಾ: ಶುಭ ಕೋರಿದ ಧಾರವಾಡ ಕಲಾವಿದರು
ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಮುಗಿಸಿದ್ದಾರೆ. ಅಥಣಿಯ ಶಿವಯೋಗಿ ಮುರುಘರಾಜೇಂದ್ರ ಮಠದಲ್ಲಿ ಪಿಯುಸಿ ಮುಗಿಸಿ, ಮುಂದೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡಿದ್ದಾರೆ. ಇನ್ನು ಮದುವೆ ಆಗಿರುವ ಇವರಿಗೆ ಇಬ್ಬರೂ ಮಕ್ಕಳಿದ್ದಾರೆ.
ಬ್ರೈಲ್ ಲಿಪಿ ಮೂಲಕ ಶಿಕ್ಷಣ ಪಡೆದು ಕಚೇರಿ ಕೆಲಸವನ್ನು ನಿಭಾಯಿಸಿಕೊಂಡು ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.