ಬಾಗಲಕೋಟೆ: ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣವನ್ನು ಒಂದು ವಾರ ಕಾಲ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಲಾಕ್‌ಡೌನ್ ಮಾಡಲು ಸ್ಥಳೀಯರು ನಿರ್ಧಾರ ಮಾಡಿದ್ದಾರೆ.
ಗುಳೇದಗುಡ್ಡ ಪಟ್ಟಣದಲ್ಲಿನ ಎಲ್ಲಾ ವಾರ್ಡ್ ಸದಸ್ಯರು, ವ್ಯಾಪಾರಸ್ಥರು ಹಾಗೂ ರಾಜಕೀಯ ಮುಖಂಡರು ಸೇರಿಕೊಂಡು ಸಭೆ ನಡೆಸಿ, ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯನವರ ಆಪ್ತರಾಗಿರುವ ಹೊಳೆಬಸು ಶೆಟ್ಟರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹಾಗೂ ಬಿಜೆಪಿ ಪಕ್ಷದ ಮುಖಂಡರು ಸಹ ಪಕ್ಷಾತೀತವಾಗಿ ಭಾಗವಹಿಸಿ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಸ್ಪತ್ರೆ ಹಾಗೂ ಔಷಧಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, ಇಂದು ಸಂಜೆ ಆರು ಗಂಟೆಗೆ ಅಂಗಡಿ, ಮುಗ್ಗಟ್ಟು, ಮದ್ಯ ಮಾರಾಟ ಹಾಗೂ ತರಕಾರಿ ಮಾರುಕಟ್ಟೆ ಸಹ ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಗುಳೇದಗುಡ್ಡ ತಾಲೂಕಿನ ತಹಶೀಲ್ದಾರ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದ್ದು, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಹೊಳಬಸು ಶೆಟ್ಟರ ತಿಳಿಸಿದ್ದಾರೆ.