ಬಾಗಲಕೋಟೆ: ಅಸಂಘಟಿತ ನೇಕಾರರನ್ನು ಕಾರ್ಮಿಕರು ಎಂದು ಗುರುತಿಸಿ ಸರ್ಕಾರದ ಯೋಜನೆಗಳು ಅವರಿಗೂ ದೊರಕುವಂತಾಗಬೇಕು ಎಂದು ಆಗ್ರಹಿಸಿ ರಬಕವಿ-ಬನಹಟ್ಟಿ ತಾಲೂಕು ತಹಶೀಲ್ದಾರ್ ಕಚೇರಿ ಎದುರು ನೇಕಾರರು ಪ್ರತಿಭಟನೆ ನಡೆಸಿದರು.
ನೇಕಾರರ ಮುಖಂಡ ಶಿವಲಿಂಗ ಟರಕಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಿವಲಿಂಗ ಟರಕಿ ಮಾತನಾಡಿ, ರೈತರು ಹಾಗೂ ಸಂಘಟಿತ ಕಾರ್ಮಿಕರಿಗೆ ಸಿಗುವ ಸಾಲ ಸೌಲಭ್ಯಗಳು ನೇಕಾರರಿಗೂ ಸಿಗಬೇಕು ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಪ್ರತಿಯೊಂದು ಸೌಲಭ್ಯ ನೇಕಾರರಿಗೂ ದೊರೆಯುವಂತಾಗಬೇಕು. ಮುಂಗಾರು ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೇಕಾರರಿಗೆ ಸಿಗುವ ಸೌಲಭ್ಯ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ಬಳಿಕ ನಾನಾ ಬೇಡಿಕೆಯ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿದರು.