ಬಾಗಲಕೋಟೆ: ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ವ್ಯಾಪರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತು. ಇದೀಗ ಕೊರೊನಾ ಅವರ ಖುಷಿಯನ್ನು ಕಸಿದುಕೊಂಡಿದೆ.
ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ಷಯ ತೃತೀಯ ದಿನದಂದು ಸುಮಾರು 50 ಕೆಜಿಯಷ್ಟು ಚಿನ್ನಾಭರಣ ಮಾರಾಟ ಆಗಿತ್ತು. ಆಗ 10 ಗ್ರಾಂ ಗೆ ಕೇವಲ 31 ಸಾವಿರ ರೂಪಾಯಿ ಬೆಲೆ ಇತ್ತು. ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿ ಮಾಡಿದರೆ, ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ.
ಆದರೆ ಈ ಭಾರಿ ಕೊರೊನಾ ವೈರಸ್ದಿಂದ ಚಿನ್ನದಂಗಡಿಗಳು ಬಂದ್ ಆದ ಹಿನ್ನೆಲೆ ಯಾರೂ ಖರೀದಿಗೆ ಬಂದಿಲ್ಲ. ಶೀಲವಂತ ಆಂಡ್ ಸನ್ಸ್ ಜ್ಯುವೆಲ್ಲರ್ಸ್ಗಳು ಆನ್ಲೈನ್ ಮೂಲಕ ಖರೀದಿ ಮಾಡುವ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಅದಕ್ಕೆ ಕೆಲವೇ ಜನರು ಸ್ಪಂದಿಸಿದ್ದಾರೆ. ಕಳೆದ ವರ್ಷ 50 ಕೆ.ಜಿ ಯಷ್ಟು ಚಿನ್ನ ಮಾರಾಟವಾಗಿ ಅಂದಾಜು 20 ಕೋಟಿಯಷ್ಟು ವ್ಯವಹಾರ ಆಗಿತ್ತು. ಆದರೆ ಈ ಬಾರಿ ವ್ಯವಹಾರ ಸಂಪೂರ್ಣ ನೆಲ ಕಚ್ಚಿದೆ.
ಅದು ಅಲ್ಲದೆ ಚಿನ್ನಭರಣಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬಾಗಲಕೋಟೆ ಜಿಲ್ಲೆಯು ರೆಡ್ ಝೋನ್ ಆಗಿದ್ದರಿಂದ ಅಂಗಡಿಯನ್ನು ತೆರೆಯುವಂತಿಲ್ಲ ಎಂದು ಚಿನ್ನಾಭರಣ ವ್ಯಾಪಾರಿಗಳಾದ ದಿನೇಶ ಬಾರ್ಶಿ ತಿಳಿಸಿದ್ದಾರೆ. ಶೀಲವಂತ ಜ್ಯುವೆಲ್ಲರ್ಸ್ ಅಂಗಡಿಯ ಮಾಲಿಕರಾದ ಮಲ್ಲಿಕಾರ್ಜುನ ಶೀಲವಂತರ ಎಂಬುವವರು ಗ್ರಾಹಕರ ಅನುಕೂಲಕ್ಕಾಗಿ ಆನ್ಲೈನ್ ಮಾರಾಟಕ್ಕೆ ಅವಕಾಶ ಮಾಡಿದ್ದಾರೆ. ಆದರೆ ಕಳೆದ ವರ್ಷ ಒಂದು ಸಾವಿರಕ್ಕೂ ಹೆಚ್ಚು ಗ್ರಾಹಕರು ಚಿನ್ನಾಭರಣ ಖರೀದಿ ಮಾಡಿದ್ದರು. ಆದರೆ ಈ ಬಾರಿ ಆನ್ಲೈನ್ ಎಂದು ಕೇವಲ 30 ಜನ ಗ್ರಾಹಕರು ಮಾತ್ರ ಖರೀದಿಸಲು ಮುಂದಾಗಿದ್ದಾರೆ ಎಂದು ಮಲ್ಲಿಕಾರ್ಜುನ ಶೀಲವಂತ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.