ಬಾಗಲಕೋಟೆ : ನೌಕರಿ ಕೊಡಿಸುವುದಾಗಿ 50 ಲಕ್ಷ ರೂಗಳು ಪಡೆದುಕೊಂಡು ಮೋಸ ಮಾಡಿದ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ, ವಿಷ ಬಾಟಲಿ ಸಮೇತ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಕುಟುಂಬದ ಸದಸ್ಯರೆಲ್ಲರೂ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಯಮನಪ್ಪ ದುಪದಾಳ ಎಂಬುವವರ ತಮ್ಮ ಭರತೇಶ ಹಾಗೂ ಅನಿಲ ಇಬ್ಬರು ಮಕ್ಕಳಿಗೆ ಪಿಎಸ್ಐ ಹಾಗೂ ಸಬ್ರಿಜಿಸ್ಟ್ರಾರ್ ಹುದ್ದೆ ಕೂಡಿಸುವುದಾಗಿ ಖದೀಮರ ಗುಂಪೊಂದು ವಂಚನೆ ಮಾಡಿದೆ.
ಧಾರವಾಡ ಮೂಲದ ಸಂಗಪ್ಪ, ತಿಪ್ಪೇಸ್ವಾಮಿ, ರವಿಕುಮಾರ್, ದುರದುಂಡೇಶ್ವರ ಸೇರಿದಂತೆ ಆರು ಜನರಿಂದ ಮೋಸ ಹೋಗಿದ್ದೇವೆ ಎಂದು ಆರೋಪಿಸಿರುವ ಕುಟುಂಬದವರು, ತಮಗೆ ನ್ಯಾಯ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ.ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮೋಸ ಹೋಗಿರುವ ಈ ಕುಟುಂಬದವರು ಬೆಂಗಳೂರಿನ ಹಿರಿಯ ಅಧಿಕಾರಿಗಳು ಸೇರಿದಂತೆ ಪಿಎಸ್ಐರಿಂದ ಹಿಡಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಎಫ್ಐಆರ್ ದಾಖಲಿಸಿದ್ದರೂ ಆರೋಪಿಗಳನ್ನು ವಿಚಾರಣೆ ನಡೆಸಿ ಬಂಧಿಸುತ್ತಿಲ್ಲ. ಈ ಹಿಂದಿನ ಎಸ್ಪಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಆಕ್ರೋಶಗೊಂಡ ಕುಟುಂಬದವರು ಈಗ ಎಸ್ಪಿ ಕಚೇರಿಗೆ ಆಗಮಿಸಿ ತಮಗೆ ಸೂಕ್ತ ನ್ಯಾಯ ಒದಗಿಸಿಕೊಡಿ,ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲೋಕೇಶ ಜಗಲಸಾರ ಅವರು, ಹತ್ತು ದಿನ ಕಾಲಾವಕಾಶ ನೀಡಿ, ಇದರ ತನಿಖೆಗೆ ಒಂದು ತನಿಖಾ ತಂಡ ರಚನೆ ಮಾಡಿ ನಿಮ್ಮಗೆ ಸೂಕ್ತ ನ್ಯಾಯ ಒದಗಿಸಿ ಕೂಡುವ ಬಗ್ಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.