ಬಾಗಲಕೋಟೆ: ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ತಮ್ಮ ತಂದೆ ಕ್ಷೇತ್ರ ತ್ಯಾಗ ಮಾಡಿ ಮೂಲೆಗುಂಪಾದ ಕಾರಣ ಅವರ ಪುತ್ರ ಭೀಮಸೇನ ತಮ್ಮ ಜನ್ಮದಿನದಂದೇ ಅಭಿಮಾನಿಗಳ ಎದುರು ಭಾವುಕರಾದ ಘಟನೆ ಬಾದಾಮಿಯಲ್ಲಿ ನಡೆಯಿತು.
ಬಾದಾಮಿಯ ಕಾಳಿದಾಸ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಭೀಮಸೇನ ಚಿಮ್ಮನಕಟ್ಟಿ ಅವರು, ನನ್ನ ತಂದೆಗೆ ಹೇಗೆ ಶಕ್ತಿ ತುಂಬಿದ್ದೀರೋ ಹಾಗೆಯೇ ನನಗೂ ಶಕ್ತಿ ತುಂಬಬೇಕು. ನನಗೆ ನಿಮ್ಮ ಬೆಂಬಲ ಬೇಕಿದೆ ಎಂದು ಹೇಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಾಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ನನಗೆ ಬಹಳ ಮಂದಿ ಹೇಳ್ತಿದ್ದಾರೆ. ಸಾಹುಕಾರ ನೀವು ಗಟ್ಟಿ ಆಗಬೇಕು ಅಂತಾ. ನಾನು ಅದನ್ನೇ ಮಾಡ್ತಿದೀನಿ. ಅದು ಎಲ್ಲಿಗೆ ಹೋಗುತ್ತೋ ಹೋಗ್ಲಿ ನೋಡೋಣ ಎನ್ನುವ ಮೂಲಕ ಬಾದಾಮಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಟಾಂಗ್ ನೀಡಿದ್ರು.
ನಾವು ಯಾರಿಗೂ ಕೆಟ್ಟದ್ದು ಮಾಡಿಲ್ಲ. ನನ್ನ ಹಣೆಬರಹ ಏನಿದಿಯೋ ಗೊತ್ತಿಲ್ಲ. ಈಗ ನಾನು ನಿಮ್ಮ ಉಡಿಯಲ್ಲಿ ಬಿದ್ದೀನಿ. ನನ್ನ ಎತ್ತಿ ಆಡಿಸೋದು ನಿಮ್ಮ ಜವಾಬ್ದಾರಿ. ನಿಮ್ಮ ಅಭಿಮಾನ ಎಂದಿಗೂ ಮರೆಯಲಾಗಲ್ಲ ಎಂದು ಭಾವುಕರಾದರು.
ಈ ವೇಳೆ ಅಲ್ಲಿ ನೆರೆದಿದ್ದ ಜನರೆಲ್ಲರೂ ಅವರನ್ನು ಅಳಬೇಡಿ, ಅಳಬೇಡಿ ಎಂದು ಸಂತೈಸಿದರು. ಅಲ್ಲದೇ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ ಎಂದು ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು.
ಇದನ್ನೂ ಓದಿ: ಮಂಡಿನೋವಿನಿಂದ ಹೊರಬರಲು ನಾಟಿ ವೈದ್ಯರ ಮೊರೆ ಹೋದ ಬೊಮ್ಮಾಯಿ : ಬೆಳಗಾವಿಯಲ್ಲಿ ಸಿಎಂಗೆ ಚಿಕಿತ್ಸೆ
ಬಳಿಕ ಮಾತನಾಡಿದ ಗುಳೇದಗುಡ್ಡ ಪಟ್ಟಣದ ಒಪ್ಪತ್ತೇಶ್ವರ ಮಠದ ಶ್ರೀಗಳು, ಭೀಮಸೇನ ಅವರಿಗೆ ಧೈರ್ಯ ಹೇಳಿದರು. ಯಾವುದಕ್ಕೂ ನೀವು ಹೆದರಬೇಡಿ. ಪ್ರೀತಿ ವಿಶ್ವಾಸ ಮೂಲಕ ಎಲ್ಲವನ್ನೂ ಎದುರಿಸಿ. ಯಶಸ್ಸು ಪಡೆಯುತ್ತೀರಿ. ನಿಮ್ಮ ಹಿಂದೆ ಜನ ಬೆಂಬಲ ಇದೆ. ಮುಂದೆ ನೀವು ರಾಜಕೀಯದಲ್ಲಿ ಯಶಸ್ಸು ಕಾಣುತ್ತೀರಿ ಎಂದು ಹಾರೈಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ ಬಳಿಕ ಕಾಂಗ್ರೆಸ್ನಲ್ಲಿ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.