ಬಾಗಲಕೋಟೆ : ಮತಾಂತರ ಅದು ವ್ಯಕ್ತಿಯ ಅಭಿವ್ಯಕ್ತಿತ್ವ ಸ್ವಾತಂತ್ರ್ಯವಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನೀಗ ಹಿಂದೂ ಧರ್ಮದಲ್ಲಿ ಇದ್ದೇನೆ.
ರಾಮ ರಾಮ ಅಂತಾರೆ ರಾಮನೇನು ಇವರಪ್ಪನ ಮನೆಯ ಸ್ವತ್ತಲ್ಲ. ರಾಮನಿಗೆ ಅತಿ ಹತ್ತಿರದವನು ಆಂಜನೇಯ, ಆಂಜನೇಯ ಇಲ್ಲದೆ ರಾಮನಿಲ್ಲ. ರಾಮನಿಲ್ಲದ ಆಂಜನೇಯ ಇಲ್ಲ ಎಂದು ಟಾಂಗ್ ನೀಡಿದರು.
ನನ್ನ ಹೆಸರು ನಮ್ಮವ್ವ ಆಂಜನೇಯ ಅಂತ್ಹೇಳಿ ಇಟ್ಟಿದ್ದಾಳೆ. ನಾನು ಹಿಂದೂಧರ್ಮದಲ್ಲಿ ಇದ್ದೇನೆ, ಕಾಂಗ್ರೆಸ್‌ನಲ್ಲಿ ಇದ್ದೇನೆ. ಕೆಲವರು ಒಂದು ಪಾರ್ಟಿಯಲ್ಲಿ ಇದ್ದುಕೊಂಡು ಹಿಂದುಗಳನ್ನು ಖರೀದಿ ಮಾಡಿದ್ದೇವೆ ಎನ್ನುವ ರೀತಿಯಲ್ಲಿದ್ದಾರೆ. ಯಾವ ಧರ್ಮದಲ್ಲಿ ಇರಬೇಕು ಅನ್ನೋದು ನನಗೆ ಬಿಟ್ಟದ್ದು.
ವ್ಯಕ್ತಿಗೆ ಅವನಿಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಬಲವಂತವಾಗಿ ಬೇಕಾದಷ್ಟು ಕಾಯ್ದೆಗಳನ್ನು ಮಾಡಿ ಹಾಕಿದ್ದಾರೆ. ಇವೆಲ್ಲ ಜನವಿರೋಧಿ ಕಾಯ್ದೆಗಳು, ನಾವು ಬಂದ ಮೇಲೆ ಅವುಗಳನ್ನೆಲ್ಲ ಸಾಯಿಸಿಬಿಡ್ತೇವೆ. ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತೇವೆ ಎಂದರು.
ಕಾಂಗ್ರೆಸ್ಸಿಗರು ಸೋನಿಯಾಗೆ ಹೆದರಿ ಮತಾಂತರ ಕಾಯ್ದೆ ವಿರೋಧಿಸುತ್ತಿದ್ದಾರೆನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವನ್ಯಾವುನೋ ಮುತಾಲಿಕ್ ಬಿಡ್ರಿ.. ಪ್ರಧಾನಿ ಹುದ್ದೆ ನಿರಾಕರಿಸಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್‌ರನ್ನ ಪ್ರಧಾನಿ ಮಾಡಿದ ತ್ಯಾಗ ಮಹಿಳೆ ಅವರು. ಭಾರತದ ಹೆಸರನ್ನು ಇಡೀ ಪ್ರಪಂಚಕ್ಕೆ ಎತ್ತಿ ಹಿಡಿದು ಕೀರ್ತಿ ತಂದಿದ್ದಾರೆ.
ಅಂತಹ ಮಹಿಳೆಯನ್ನ ಟೀಕಿಸುವ ಯೋಗ್ಯತೆ, ನೈತಿಕತೆ ಮುತಾಲಿಕ್‌ಗೆ ಇಲ್ಲ. ಸೋನಿಯಾ ಗಾಂಧಿ ಈ ದೇಶದ ಆದರ್ಶ ಮಹಿಳೆ. ಅವರನ್ನು ಓಲೈಸಿ ಹೇಳುವಂತಹದ್ದೇನಿಲ್ಲ ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಜನರು ವಿರೋಧ ಮಾಡುವ ಕಾಯ್ದೆ ಜಾರಿಗೆ ತಂದ್ರು ನಾವು ವಿರೋಧಿಸುತ್ತೇವೆ. ಅವರಿವರನ್ನು ಓಲೈಸೋರು ನಾವಲ್ಲ. ಸೋನಿಯಾಗಾಂಧಿ ಎಲ್ಲ ದೇವರನ್ನು ಆರಾಧಿಸಿ ಸರ್ವಧರ್ಮಿಯ ನಾಯಕಿಯಾಗಿದ್ದಾರೆ. ವಿದೇಶದಿಂದ ಬಂದು ಅತ್ತೆ ಕಳೆದುಕೊಂಡಳು, ಗಂಡನನ್ನ ಕಳೆದುಕೊಂಡು ವಿಧವೆ ಆದಳು.
ಹಾಗಿದ್ದರೂ ಪ್ಯಾಕಪ್ ಮಾಡಿಕೊಂಡು ಹೋಗಲಿಲ್ಲ. ಎಲ್ಲವನ್ನು ಬಿಟ್ಟು ಇಲ್ಲಿಯೇ ಉಳಿದರು. ಇಂತವರನ್ನು ಟೀಕೆ ಮಾಡೋರಿಗೆ ಯಾವುದೇ ಜ್ಞಾನ ಇಲ್ಲ ಎಂದರು. ಹಿಂದೂಧರ್ಮ ಪ್ರಚಾರ ಮಾಡಿ ಮನಸ್ಸು ಪರಿವರ್ತನೆ ಮಾಡಿ ನಮ್ಮ ಧರ್ಮದಲ್ಲೇ ಉಳಿಯುವಂತೆ ಮಾಡಲಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರು.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆಹಾರ ಆಯ್ಕೆ ಅವರ ಇಷ್ಟಕ್ಕೆ ಬಿಟ್ಟ ವಿಚಾರ. ವೀಕ್ ಇದ್ದ ಮಕ್ಕಳಿಗೆ ಮೊಟ್ಟೆ ತಿನ್ನುವಂತೆ ಡಾಕ್ಟರೇ ಸಲಹೆ ಕೊಡ್ತಾರೆ. ಅದನ್ನ ಸ್ವಾಮೀಜಿಗಳು ವಿರೋಧ ಮಾಡೋದು ಸರಿಯಲ್ಲ.
ಮೊಟ್ಟೆ ತಿನ್ನದ ಸಮುದಾಯವಿದ್ದರೆ ತಿನ್ನೋದು ಬೇಡ, ತಿನ್ನುವ ಮಕ್ಕಳಿದ್ದರೆ ತಿನ್ನಲಿ ಎಂದ ಅವರು, ಸ್ವಾಮಿಗಳು ಸ್ವಲ್ಪ ಯೋಚನೆ ಮಾಡಿ ಹೇಳಿಕೆ ನೀಡಬೇಕು. ನಾನು ಎಲ್ಲ ಮಕ್ಕಳಿಗೂ ತಿನ್ನಿಸಿ ಅಂತಾ ಹೇಳಲ್ಲ,ಇಷ್ಟಪಡೋ ಮಕ್ಕಳಿಗೆ ಮೊಟ್ಟೆ ನೀಡಿ ಅಂತಾ ಹೇಳುತ್ತೇನೆ.
ನಾವು ಸ್ಕೂಲ್‌ಗೆ ಹೋಗೋವಾಗ ಏನೇನೂ ಇರಲಿಲ್ಲ. ಬಡತನ ಸ್ಕೂಲ್‌ಗೆ ಉಪವಾಸ ಹೋಗ್ತಿದ್ದೇವು, ತಲೆ ತಿರುಗಿ ಬಿಳ್ತಿದ್ದೇವು. ಈಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ,ಮೊಟ್ಟೆಗಳನ್ನು ಸರ್ಕಾರ ಮಕ್ಕಳ ಆರೋಗ್ಯ ಗಮನಿಸಿ ಪೌಷ್ಠಿಕ ಆಹಾರ ನೀಡುತ್ತದೆ ಎಂದರು.