ಬಾಗಲಕೋಟೆ: ಜಿಲ್ಲೆಯ ನವನಗರದ ಕಲಾಭವನದಲ್ಲಿ ಕನ್ನಡ ಪ್ರಾಧಿಕಾರ ವತಿಯಿಂದ ಬೆಳಗಾವಿ ವಿಭಾಗ ಮಟ್ಟದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂ,ಆಂಧ್ರಪ್ರದೇಶದ ದಲ್ಲಿ ತೆಲುಗು, ಉತ್ತರ ಪ್ರದೇಶದಲ್ಲಿ ಹಿಂದಿ ಮಾತನಾಡುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಸರಿಯಾಗಿ ಇಂಗ್ಲಿಷ್ ಬಾರದಿದ್ದರೂ ಸಹ ಇಂಗ್ಲಿಷ್ನಲ್ಲೇ ಮಾತನಾಡುತ್ತೇವೆ ಎಂದು ವ್ಯಂಗ್ಯವಾಡಿದರು. ಬೆಂಗಳೂರಿನಲ್ಲಿ ಪ್ರತಿಶತ 80 ರಷ್ಟು ಜನ ಕನ್ನಡ ಮಾತನಾಡುತ್ತಿಲ್ಲ, ಹೀಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಎಲ್ಲರೂ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಪ್ರಾಧಿಕಾರ ಅಧ್ಯಕ್ಷರಾದ ಎಸ್ ಸಿದ್ದರಾಮಯ್ಯ ಮಾತನಾಡಿ, ಕನ್ನಡ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್ ಇದ್ದರು. ಈ ಸಂದರ್ಭದಲ್ಲಿ ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ವಿಜಯಪುರ, ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಂದ ಆಗಮಿಸಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.