ಬಾಗಲಕೋಟೆ : ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಜನತೆ ಯಾವುದೇ ರೀತಿಯ ಆತಂಕಪಡುವಂತಿಲ್ಲ. ಪ್ರವಾಹ ಉಂಟಾದ ಪ್ರದೇಶದ ಬಗ್ಗೆ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೇ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸುವರು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರವಾಹ ಉಂಟಾಗಿರುವ ಕುರಿತು ನಡೆದ ತುರ್ತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ನಡುಗಡ್ಡೆ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಇಲ್ಲಿನ 38 ಕುಟುಂಬಗಳ ಪೈಕಿ ಈಗಾಗಲೇ 10 ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆದ್ಯೊಯಲಾಗಿದೆ. ಜನ- ಜಾನುವಾರುಗಳಿಗೆ ಯಾವುದೇ ರೀತಿಯ ಹಾನಿ ಆಗಿಲ್ಲ. ಉಳಿದ 28 ಕುಟುಂಬಗಳ ರಕ್ಷಣೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಉಂಟಾದಲ್ಲಿ ತಕ್ಷಣವೇ ಅವರನ್ನು ಬೇರೆಡೆಗೆ ಸ್ಥಳಾಂತರಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಭರವಸೆ ನೀಡಿದರು.
ಪ್ರವಾಹ ಪರಿಸ್ಥಿತಿ ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಇಲ್ಲವೇ ಸಂದೇಶದ ಮೂಲಕ ಮಾಹಿತಿ ತಿಳಿಸಿ. ಈಗಾಗಲೇ ಪ್ರವಾಹದಿಂದ ಜಮಖಂಡಿ ತಾಲೂಕಿನ ತುಬಚಿ- ಸುರಪಾಲಿ ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ತುಬಚಿಗೆ ಬರುವ ಸಾರ್ವಜನಿಕರು ಜಮಖಂಡಿ- ಸಾವಳಗಿ- ತುಂಗಳ ಮಾರ್ಗವಾಗಿ ಸಂಚರಿಸುವಂತೆ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ಗಳು ದಿನಕ್ಕೆ 4 ಬಾರಿ ಸಂಚರಿಸಲಿದ್ದು, ಅಗತ್ಯವಿದ್ದರೇ ಹೆಚ್ಚುವರಿ ಬಸ್ಗಳನ್ನು ಒದಗಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು.
ನದಿಗಳ ಒಳಹರಿವಿನ ಮಾಹಿತಿಯನ್ನು ಕಾಲಕಾಲಕ್ಕೆ ಪಡೆಯುತ್ತಿರಬೇಕು. ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ತಕ್ಷಣವೇ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದ್ಯೊಯಬೇಕು. ಇದಕ್ಕಾಗಿ ಬೋಟ್ಗಳನ್ನು ಸುಸ್ಥಿಯಲ್ಲಿರುವಂತೆ ನೋಡಿಕೊಳ್ಳಬೇಕು. ಬೋಟ್ನಲ್ಲಿ ಜನರನ್ನು ಸಾಗಿಸುವಾಗ ಕಡ್ಡಾಯವಾಗಿ ಲೈಪ್ ಜಾಕೇಟ್‍ಗಳನ್ನು ಧರಿಸುವಂತೆ ಸಲಹೆ ನೀಡಿದರು.
ಗಂಜಿ ಕೇಂದ್ರ ತೆರೆಯುವಾಗ ಶಾಲಾ ಕೊಠಡಿಗಳ ಸ್ವಚ್ಛತೆ ಪರಿಶೀಲಿಸಬೇಕು. ಪ್ರವಾಹಕ್ಕೊಳಗಾದ ಜನರನ್ನು ಸ್ಥಳಾತರಿಸಿದಾಗ ಅವರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಬರಿಗಾಲಲ್ಲಿ ನಡೆಯದಂತೆ ತಿಳಿಸಿ. ಪ್ರವಾಹದ ಬಳಿಕ ವಿಷ ಜಂತುಗಳು ಹಾವಳಿ ಹೆಚ್ಚಾಗಲಿವೆ. ಈ ಬಗ್ಗೆ ಜನರು ಎಚ್ಚರವಾಗಿ ಇರುವಂತೆ ತಿಳಿಸಿದರು.
ಸಂತ್ರಸ್ತರಿಗೆ ಅಗತ್ಯವಾದ ಔಷಧಿಗಳನ್ನು ಒದಗಿಸಲು ಆರೋಗ್ಯ ಇಲಾಖೆಯವರು ಕ್ರಮಕೈಗೊಳ್ಳಬೇಕು. ಪ್ರವಾಹ ಪೀಡಿತ ಗ್ರಾಮಗಳ ಮಾಹಿತಿಯ ಬುಕ್ಲೆಟ್ ಅನ್ನು ನೋಡಲ್ ಅಧಿಕಾರಿಗಳು, ವೈದ್ಯರು, ಪೊಲೀಸ್ ಸಿಬ್ಬಂದಿ, ಅಗ್ನಿ ಶಾಮಕ ದಳ ಸಿಬ್ಬಂದಿ ತಮ್ಮ ವಾಹನದಲ್ಲಿ ಕಡ್ಡಾಯವಾಗಿ ಇರಿಸಿಕೊಳ್ಳಬೇಕು ಎಂದು ತಿಳಿಸಿದರು.