ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತಗ್ಗದ ಹಿನ್ನೆಲೆ, ಕೃಷ್ಣಾ ನದಿ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ.
ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಪ್ರವಾಹ ತಗ್ಗದ ಹಿನ್ನೆಲೆ ದಿನದಿಂದ ದಿನಕ್ಕೆ ಸಾಕಷ್ಟು ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಇದರಿಂದ ಚಿಕ್ಕಪಡಸಲಗಿ ಬ್ಯಾರೇಜ್ಗೆ ಹೆಚ್ಚಿನ ನೀರು ಆಗಮಿಸಿದ ಪರಿಣಾಮ ಆಲಗೂರ ಗಡ್ಡೆದಲ್ಲಿ ಹತ್ತುಕ್ಕೂ ಹೆಚ್ಚು ಗುಡಿಸಲಿಗೆ ನೀರು ನುಗ್ಗಿದೆ. ತೋಟದ ಶಾಲೆ ಹಾಗೂ ಪ್ರವಾಹ ಭೀತಿ ಹೊಂದಿರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಮೂರು ದಿನಗಳ ಕಾಲ ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ.
ನಿನ್ನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಕೃಷ್ಣಾ ನದಿ ದಾಟುವ ಸಂದರ್ಭದಲ್ಲಿ ರೈತ ಬಾಳಪ್ಪ ಕಿಸ್ತಿ ಎಂಬುವವರಿಗೆ ಸೇರಿದ ಎಮ್ಮೆ ನೀರಿನ್ನಲ್ಲಿ ಮುಳಗಿ ಸಾವನ್ನಪ್ಪಿತ್ತು. ಇನ್ನು ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಇತರ ಅಧಿಕಾರಿಗಳು ಕಡಕೋಳ, ಮುತ್ತೂರು, ಮೈಗೂರ, ಚಿಕ್ಕಪಡಸಲಗಿ ಬ್ಯಾರೇಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಮತ್ತಷ್ಟು ಪ್ರವಾಹ ಹಾಗೂ ಮುಳಗಡೆ ಭೀತಿ ಎದುರಾಗುವ ಸಂಭವವಿರುವುದರಿಂದ ಬೆಂಗಳೂರಿನಿಂದ ನೂರಕ್ಕೂ ಹೆಚ್ಚು ಯೋಧರನ್ನು ಜಿಲ್ಲಾಡಳಿತ ಜಮಖಂಡಿಗೆ ಕರೆಸಲಾಗಿದೆ. ಇದರಿಂದ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ.