ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಹೆರಕಲ್ಲ ಗ್ರಾಮದ ಬಳಿ ಕಬ್ಬಿನ ಗದ್ದೆಯಲ್ಲಿ 5 ನರಿ ಮರಿಗಳು ಪತ್ತೆಯಾಗಿವೆ. ಗ್ರಾಮದ ಯೋಧ ಈರಪ್ಪ ವಾರದ ಎಂಬುವವರ ಜಮೀನಿನಲ್ಲಿ ಮರಿಗಳು ಪತ್ತೆಯಾಗಿವೆ.
ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಈರಪ್ಪ ಅವರು ರಜೆ ಸಮಯದಲ್ಲಿ ಮನೆಗೆ ಬಂದಿದ್ದರು. ತಮ್ಮ ಜಮೀನು ಕಬ್ಬು ಕಟಾವು ಮಾಡುವಾಗ ನರಿ ಮರಿಗಳು ಪತ್ತೆಯಾಗಿವೆ. ಐದು ಮರಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಲು ನೀಡಿದ್ದಾರೆ. ಆದರೆ, ಕೇವಲ ಎರಡು ದಿನಗಳ ಮರಿ ಇರುವುದರಿಂದ ತಾಯಿಯ ಹಾಲನ್ನು ಬಿಟ್ಟು ಬೇರೆ ಯಾವುದೇ ಹಾಲನ್ನು ಕುಡಿಯುತ್ತಿಲ್ಲ.
ಹೀಗಾಗಿ ಈರಪ್ಪ ಮರಿಗಳನ್ನು ತಮ್ಮ ಜಮೀನಿನಲ್ಲಿ ವಾಪಸ್ ಇಟ್ಟು ಬಂದಿದ್ದಾರೆ. ಆದರೆ ತಾಯಿ ನರಿ ಮರಿಗಳ ಹತ್ತಿರ ಇನ್ನೂ ಬಂದಿಲ್ಲ. ಹೀಗಾಗಿ ಮರಿಗಳನ್ನು ಏನು ಮಾಡಬೇಕು ಎಂಬ ಚಿಂತನೆಯಲ್ಲಿ ಯೋಧ ಈರಪ್ಪ ಇದ್ದಾರೆ. ಇಂದು ಮಧ್ಯಾಹ್ನ ತಮ್ಮ ಕೆಲಸಕ್ಕೆ ಕಾಶ್ಮೀರಕ್ಕೆ ಹೋಗುತ್ತಿರುವ ಈರಪ್ಪ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಆಗಮಿಸಿ ಸೂಕ್ತ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಬೀಳಗಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮರಿಗಳು ಮೊದಲು ಇದ್ದ ಜಾಗಕ್ಕೆ ಬಿಡುವಂತೆ ಮಾಹಿತಿ ನೀಡಿದ್ದಾರೆ. ನರಿ ಮರಿಗಳನ್ನು ಹುಡುಕಿಕೊಂಡು ತಾಯಿ ನರಿ ಹತ್ತಿರ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿಡಿಯೋ: ಮಣ್ಣಿನ ಕುಂಡದಲ್ಲಿ ನೂರಾರು ಹಾವುಗಳು ಪತ್ತೆ!