ಬಾಗಲಕೋಟೆ: ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಪ್ರಾರಂಭವಾಗಿದ್ದು, ಜೀವ ಕೂಟ್ಟಾದರೂ ಮೀಸಲಾತಿ ಪಡೆದುಕೊಳ್ಳುತ್ತೇವೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದಲ್ಲಿ ಬಡವರು ಹೆಚ್ಚಾಗಿದ್ದಾರೆ. ಮೀಸಲಾತಿಯಿಂದ ಉದ್ಯೋಗ ಹಾಗೂ ಇತರ ಸೌಲಭ್ಯಗಳು ಸಿಗಲಿವೆ. ಈ ಹಿನ್ನೆಲೆ ಇದೇ 14 ರಂದು ಕೂಡಲಸಂಗಮದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ಸುಮಾರು 2 ಲಕ್ಷ ಜನರು ಸೇರುವ ಮೂಲಕ ಸರ್ಕಾರಕ್ಕೆ ಸಂದೇಶ ರವಾನಿಸುತ್ತೇವೆ ಎಂದರು.
ಬಿಜೆಪಿಯಲ್ಲಿಯೇ ನಮ್ಮ ಸಮಾಜದ 15 ಜನ ಶಾಸಕರು, ಕೆಲ ಸಚಿವರು ಇದ್ದಾರೆ. ನಾವು ನಮ್ಮ ಸಮುದಾಯದವರೆಗೆ ಸಚಿವ ಸ್ಥಾನ, ನಿಗಮ ಮಂಡಳಿ ಸೇರಿದಂತೆ ಇತರ ಸೌಲಭ್ಯಗಳನ್ನು ಕೇಳುವುದಿಲ್ಲ, ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಬಿಜೆಪಿಯಲ್ಲಿರುವ ನಮ್ಮ ಸಮಾಜದ ಶಾಸಕರು, ಸಚಿವರು ಸಹ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.