ಬಾಗಲಕೋಟೆ: ಮಹಾರಾಷ್ಟ್ರ ರಾಜ್ಯದಲ್ಲಿ ವರುಣನ ಅಬ್ಬರ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿರುವ ಚಿಕ್ಕ ಪಡಸಲಗಿ ಬ್ಯಾರೇಜ್ ತುಂಬಾ ನೀರು ಹರಿಯುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಜಯಪುರ-ಧಾರವಾಡ, ಬೆಳಗಾವಿ ರಸ್ತೆ ಸಂಪರ್ಕ ಸ್ಥಗಿತ ಗೊಳಿಸಲಾಗಿದ್ದು, ರೈತರೇ ನಿರ್ಮಾಣ ಮಾಡಿದ್ದ ಶ್ರಮ ಬಿಂದು ಸಾಗರ ಹಾಗೂ ಬೃಹತ್ ನೀರು ಎತ್ತುವ ಮೋಟರ್ ಸಂಪೂರ್ಣ ಜಲಾವೃತಗೊಂಡಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 2.65 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ಚಿಕ್ಕ ಪಡಸಲಗಿ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ಹರಿಯುತ್ತಿದೆ. ಇದರಿಂದ ಸ್ಥಳೀಯರು ಆತಂಕ ಪಡುವಂತಾಗಿದೆ.
ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಬಳಿ ನೀರಿನ ಹರಿವು ನೋಡಲು ಜನ ಜಮಾಯಿಸುತ್ತಿದ್ದಾರೆ.