ಬಾಗಲಕೋಟೆ: ಕಬ್ಬು ಬೆಳೆಗೆ ಸೂಕ್ತ ದರ ನಿಗದಿಗೊಳಿಸಬೇಕು ಮತ್ತು ಹಿಂದಿನ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿ ರೈತರು ಸಂಜೆ ಮುಧೋಳ ಪಟ್ಟಣದಲ್ಲಿ ದಿಢೀರನೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಮುಧೋಳ ಪಟ್ಟಣದ ತಹಶಿಲ್ದಾರರ ಕಚೇರಿ ಎದುರು ವಿಜಯಪುರ- ಧಾರವಾಡ ಹಾಗೂ ಬೆಳಗಾವಿ ಮಾರ್ಗ ಸಂಚಾರ ರಸ್ತೆ ಸ್ಥಗಿತಗೊಳಿಸಿ ಕೆಲ ಸಮಯ ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಕಬ್ಬು ಬೆಳೆದ ರೈತರಿಗೆ ಕಾರ್ಖಾನೆ ಆಡಳಿತ ಮಂಡಳಿಯವರು ಬಾಕಿ ಹಣ ಪಾವತಿಸಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿದರೂ ಇನ್ನು ಸರಿಯಾದ ಹಣ ಪಾವತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯ ವಾಗಿದೆ. ಸೋಮವಾರದ ಒಳಗೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಸೋಮವಾರದಿಂದ ಅನಿರ್ಧಿಷ್ಟ ಕಾಲದವರೆಗೆ ಹಗಲು-ರಾತ್ರಿ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.