ಬಾಗಲಕೋಟೆ: ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ತಾತ್ಕಾಲಿಕ ಅಂತ್ಯ ಸಿಕ್ಕಿದೆ. ಮುಧೋಳ ರೈತರು ಸತತ 53 ದಿನಗಳಿಂದ ಕಬ್ಬಿಗೆ 2900 ರೂ. ದರ ನೀಡಬೇಕು ಎಂದು ಅನೇಕ ರೀತಿಯ ಹೋರಾಟಗಳನ್ನ ಮಾಡಿ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರನ್ನ ಎಚ್ಚರಿಸುವ ಕೆಲಸ ಮಾಡಿದ್ದರು.
ಸಚಿವರ ನೇತೃತ್ವದಲ್ಲಿ ಸಭೆಗಳಾದರೂ ಯಾವುದೇ ಒಮ್ಮತಕ್ಕೆ ಬಾರದೇ ಸಭೆ ವಿಫಲವಾಗಿತ್ತು. ನಂತರ ಸಕ್ಕರೆ ಆಯುಕ್ತರ ಸೂಚನೆಯಂತೆ ಪ್ರತಿ ಟನ್ ಕಬ್ಬಿಗೆ 2850 ರೂ. ಬೆಲೆ ನಿಗದಿ ಮಾಡಿ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಿಲ್ಲೆಯ ಎಲ್ಲ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದರು. ಆದರೂ ಕಾರ್ಖಾನೆ ಮಾಲೀಕರು ಸರ್ಕಾರ ಹಾಗೂ ಅಧಿಕಾರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಹೀಗಾಗಿ ಇಂದು ಮುಧೋಳ ರೈತರು ಸಚಿವ ನಿರಾಣಿ ಒಡೆತನದ ಕಾರ್ಖಾನೆಗೆ ಮುತ್ತಿಗೆ ಹಾಕುವ ಯೋಜನೆ ಇಟ್ಟುಕೊಂಡಿದ್ದರು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದ ಜಿಲ್ಲಾಡಳಿತಕ್ಕೆ ಸಿಎಂ ದೂರವಾಣಿ ಮೂಲಕ ಮಾತನಾಡಿ, ಬೆಲೆ ನಿಗದಿ ಮಾಡಿ ಎಂದು ಸೂಚನೆ ನೀಡಿದ ಬೆನ್ನಲ್ಲೇ ಮಧ್ಯಸ್ಥಿಕೆ ವಹಿಸಿದ ಜಿಲ್ಲೆಯ ಅಧಿಕಾರಿಗಳು ರೈತರು ಧರಣಿ ನಡೆಸಿರುವ ಸ್ಥಳಕ್ಕೆ ಆಗಮಿಸಿ, 2,850 ರೂಗಳ ಬೆಲೆ ನಿಗದಿ ಮಾಡಿರುವ ಭರವಸೆ ನೀಡಿದ್ದರು.
ಬೀದಿಗಿಳಿದು ಹೋರಾಡುವುದಾಗಿ ಎಚ್ಚರಿಕೆ: ಅಧಿಕಾರಿಗಳ ಭರವಸೆಗೆ ಒಪ್ಪಿದ ರೈತರು ಹೋರಾಟವನ್ನ ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದರು. ಕಾರ್ಖಾನೆ ಮಾಲೀಕರು ರೈತರ ಅಕೌಂಟ್ಗೆ 15 ದಿನಗಳಲ್ಲಿ ಪ್ರತಿ ಟನ್ ಕಬ್ಬಿಗೆ 2850 ರೂ ನಂತೆ ಹಣ ಹಾಕದಿದ್ರೆ, ಸಿಎಂ ಮಾತಿಗೆ ತಪ್ಪಿದ್ದಲ್ಲಿ ಮತ್ತೆ ಬೀದಿಗಿಳಿದು ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿ, ತಾತ್ಕಾಲಿಕವಾಗಿ ಹೋರಾಟ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಪತ್ರಿ ಟನ್ಗೆ 2850 ರೂ ದರ ನೀಡುವಂತೆ ಒತ್ತಡ: ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಜಿಲ್ಲೆಯ ಸಚಿವರಿಗೆ ರೈತರ ಹೋರಾಟ ಬಿಸಿ ತುಪ್ಪವಾಗಿತ್ತು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿಯೇ ರೈತರು ಹೋರಾಟ ನಡೆಯುತ್ತಿರುವ ಸಚಿವರಿಗೆ ಸಂಕಷ್ಟ ಎದುರಾಗಿತ್ತು. ಈ ಹಿನ್ನೆಲೆ ಕಳೆದ ರಾತ್ರಿ ಕಾರಜೋಳ ಅವರು, ಸಿಎಂ ಮೂಲಕ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಒತ್ತಡ ತಂದು ಪತ್ರಿ ಟನ್ಗೆ 2850 ರೂಪಾಯಿಯಂತೆ ದರ ನೀಡುವಂತೆ ಒತ್ತಡ ತಂದಿದ್ದಾರೆ.
ಮತ್ತೆ ಹೋರಾಟದ ಎಚ್ಚರಿಕೆ: 15 ದಿನಗಳ ಕಾಲಾವಕಾಶ ಕೇಳಿದ್ದು, ನಂತರ ರೈತರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಹಗ್ಗ ಜಗ್ಗಾಟ ಮುಂದುವರೆಯುತ್ತೋ ಅಥವಾ ಸರ್ಕಾರದ ಆದೇಶದಂತೆ ದರ ನೀಡುತ್ತಾರೆಯೋ ಕಾದು ನೋಡಬೇಕಾಗಿದೆ. ಆದರೆ, ರೈತರು ಮಾತ್ರ 2850 ರೂಪಾಯಿಗಳ ದರ ನೀಡದೇ ಇದ್ದಲ್ಲಿ ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಓದಿ: ಕಬ್ಬು ಬೆಳೆ ದರ ನಿಗದಿಗೆ ಒತ್ತಾಯಿಸಿ ಸಮೀರವಾಡಿ ರೈತರ ಹೋರಾಟ.. ಕಲ್ಲು ತೂರಾಟ, ಪೊಲೀಸರಿಗೆ ಗಾಯ