ಬಾಗಲಕೋಟೆ : ಕಬ್ಬು ಬೆಳೆಗೆ ಪ್ರತಿ ಟನ್ಗೆ 2,900 ರೂಪಾಯಿ ದರ ನಿಗದಿಪಡಿಸುವಂತೆ ಒತ್ತಾಯಿಸಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳಿಂದ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ನಗರದ ಗದ್ದನಕೇರಿ ಕ್ರಾಸ್ನಲ್ಲಿ ಎರಡು ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಎರಡನೇ ದಿನದ ರೈತರ ಹೋರಾಟವು ಮುಧೋಳ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿತ್ತು. ಹುಬ್ಬಳ್ಳಿ- ಸೋಲಾಪುರ ಹಾಗೂ ರಾಯಚೂರು- ಬೆಳಗಾವಿ ಎರಡೂ ಹೆದ್ದಾರಿ ರಸ್ತೆ ಬಂದ್ ಮಾಡಿ, ರಸ್ತೆಯ ಮಧ್ಯದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ಟ್ರ್ಯಾಕ್ಟರ್ ಗಳನ್ನು ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ಮಾಡಲಾಯಿತು. ಇಲ್ಲಿನ ಗದ್ದನಕೇರಿ ಕ್ರಾಸ್, ಲೋಕಾಪೂರ, ಮುಧೋಳ, ರಬಕವಿ ಬನಹಟ್ಟಿ ಸೇರಿದಂತೆ ವಿವಿಧೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ರೈತರ ಪ್ರತಿಭಟನೆ: ಕಳೆದ ಒಂದು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಬ್ಬು ಬೆಳೆಗಾರರು, ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂವರು ಸಚಿವರ ಸಮ್ಮುಖದಲ್ಲಿ ನಡೆದ ಸಭೆ ವಿಫಲವಾಗಿತ್ತು. ಇದರಿಂದ ರೈತರು ಮುಧೋಳ ಪಟ್ಟಣ ಬಂದ್ ಮಾಡಿ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿಗೆ ಪ್ರತಿ ಟನ್ಗೆ 2900 ರೂ. ನೀಡುವಂತೆ ರೈತರ ಒತ್ತಾಯ : ಸರ್ಕಾರವು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಪ್ರತಿ ಟನ್ ಗೆ 2900 ರೂಪಾಯಿಯಂತೆ ದರ ನಿಗದಿಗೊಳಿಸಲು ಸೂಚಿಸಬೇಕು ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಧಮ್ ತಾಕತ್ತು ಎಂದು ಮಾತನಾಡುತ್ತಾರೆ. ಆದರೆ, ನಾವು ಆ ರೀತಿ ಮಾತನಾಡುವುದಿಲ್ಲ. ಸರ್ಕಾರ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಟನ್ ಗೆ 2900 ದರ ಕೊಡಿಸುವಂತೆ ಮಾಡಿ ಎಂದು ಹೇಳಿದರು.
ಇತ್ತೀಚೆಗೆ ಮೂವರು ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎರಡು ದಿನ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಕಾಲಾವಕಾಶ ಮುಗಿದಿದ್ದು, ಹೀಗಾಗಿ ಪ್ರತೀ ಟನ್ ಕಬ್ಬಿಗೆ 2900 ಸರ್ಕಾರ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಸರ್ಕಾರವೇ ಹೊಣೆ ಆಗಲಿದೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆ ಮುಧೋಳ ಪಟ್ಟಣದಲ್ಲಿ 3 ಡಿವೈಎಸ್ಪಿ, 11 ಸಿಪಿಐ, 30 ಪಿಎಸ್ ಐ, 76 ಎಎಸ್ ಐ, 626 ಪೊಲೀಸ್ ಸಿಬ್ಬಂದಿ ಹಾಗೂ
10 ಡಿಎಆರ್ ತುಕುಡಿ, 4 ಕೆ ಎಸ್ ಆರ್ ಪಿ ತುಕುಡಿ ನಿಯೋಜನೆ ಮಾಡಲಾಗಿತ್ತು.
ವಿಜಯಪುರದಲ್ಲೂ ರೈತರ ಪ್ರತಿಭಟನೆ: ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ದರ ನಿಗದಿ ಮಾಡುತಿಲ್ಲ ಎಂದು ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿನ ಬಸವೇಶ್ವರ ಸಕ್ಕರೆ ಕಾರ್ಖಾನೆ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರೈತರ ಬೇಡಿಕೆಯಂತೆ ಕಬ್ಬಿಗೆ ಸೂಕ್ತ ದರ ಮಾಡುವಲ್ಲಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಒಂದು ಟನ್ ಕಬ್ಬಿಗೆ 2,900 ರೂ. ದರವನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಪ್ರತಿಭಟನೆಯಿಂದಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ : ಬೇಡಿಕೆ ಈಡೇರಿಸುವಂತೆ ಕಬ್ಬು ಬೆಳೆಗಾರರ ಆಗ್ರಹ.. ಮಂಡ್ಯದಲ್ಲಿ ರೈತರ ಬೃಹತ್ ಪ್ರತಿಭಟನೆ