ಬಾಗಲಕೋಟೆ: ಎಸ್ಎಸ್ಎಲ್ಸಿ ಹಾಲ್ ಟಿಕೆಟ್ಗಾಗಿ ಶಾಲೆಯಲ್ಲಿ ವಿದ್ಯಾರ್ಥಿ ಕುಟುಂಬ ಧರಣಿ ನಡೆಸಿದ ಘಟನೆ ಜಿಲ್ಲೆಯ ರಬಕವಿ ಬನ್ನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಜರುಗಿದೆ.
ಕಳೆದ ನಾಲ್ಕು ದಿನಗಳಿಂದ ಶಾಲೆಯಲ್ಲಿ ಧರಣಿ ಕುಳಿತುಕೊಳ್ಳುವ ಮೂಲಕ ಶಿಕ್ಷಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಜೊತೆ ಅಜ್ಜಿ, ಮಾವ ಪ್ರತಿಭಟನೆ ನಡೆಸಿದ್ದಾರೆ. ಆಸಂಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ನಿಯಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪರೀಕ್ಷೆಗೆ ಇನ್ನು ಎರಡೇ ದಿನ ಬಾಕಿ ಇರುವಾಗ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಭಾಗ್ಯ ಸಿಕ್ಕಿಲ್ಲ. ಮೂಸಾ ಅಕ್ರೂಟ ಹಾಗೂ ಮೋಸಿನ ಮೋಮಿನ ಎನ್ನುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಇಲ್ಲದ ಕಾರಣ ಶಿಕ್ಷಕರಿಗೆ ನೀಡುವಂತೆ ಒತ್ತಾಯಿಸಿ, ಧರಣಿ ಕುಳಿತುಕೊಂಡಿದ್ದರು.
ವಿದ್ಯಾರ್ಥಿಗಳು ಫೋಟೋ ಕೊಟ್ಟಿಲ್ಲ. ಈ ಬಗ್ಗೆ ಪಾಲಕರಿಗೆ ಹೇಳಿದ್ರೂ ಕೊನೆಗಳಿಗೆವರೆಗೂ ತಂದು ಕೊಟ್ಟಿಲ್ಲ ಎಂದು ಶಾಲೆ ಮುಖ್ಯಸ್ಥರು ಹೇಳಿದ್ದಾರೆ.
ಎಲ್ಲವನ್ನು ಕೊಟ್ಟಿದ್ದೇವೆ. ಇವರ ತಪ್ಪಿನಿಂದ ಹಾಲ್ ಟಿಕೆಟ್ ಬಂದಿಲ್ಲ. ಶಾಲೆಯ ಮುಖ್ಯಸ್ಥರೇ ಹೊಣೆ ಎಂದು ಕುಟುಂಬದವರು ದೂರಿದ್ದಾರೆ.