ಬಾಗಲಕೋಟೆ : ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಲೋಕಾಪೂರ ಗ್ರಾಮದ ಮಹಾಂತೇಶ್ ಉದುಪುಡಿ ಬ್ಲ್ಯಾಕ್ ಫಂಗಸ್ನಿಂದ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು ದೃಢ ಪಟ್ಟ ನಂತರ, ಮೊದಲು ಮುಧೋಳದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ಕರೆದುಕೊಂಡು ಹೋಗಿದ್ದಾರೆ. ಬ್ಲ್ಯಾಕ್ ಫಂಗಸ್ ಬಂದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಜೈಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ಚಿಕಿತ್ಸೆ ನೀಡಿದ ಬಳಿಕ ಸ್ವಲ್ಪ ಮಟ್ಟಿಗೆ ಗುಣಮುಖರಾಗಿದ್ದಾರೆ. ಇನ್ನೇನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎನ್ನುವಷ್ಟರಲ್ಲಿಯೇ ಮತ್ತೆ ಜ್ವರ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿರುವ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಸಾವಿನ ಸಂಖ್ಯೆ 5ಕ್ಕೆ ಏರಿದೆ.
ಮೃತರು ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಯುವ ರಾಜಕಾರಣಿ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.