ಬಾಗಲಕೋಟೆ: ಜಿಲ್ಲೆಯ ಕೆರೂರ ಗುಂಪು ಘರ್ಷಣೆಯ ಗಾಯಾಳುಗಳ ಕುಟುಂಬಸ್ಥರಿಗೆ ಮಾನವೀಯತೆ ದೃಷ್ಟಿಯಿಂದ ಹಣ ಕೊಟ್ಟಿದ್ದೆ. ಆದರೆ, ಅವರಿಗೆ ಯಾರೋ ಎತ್ತಿಕಟ್ಟಿದ್ದರಿಂದ ಹಣ ಎಸೆದಿರುತ್ತಾರೆ. ಆದರೂ, ನಾವು ಮತ್ತೆ ಹಣವನ್ನು ಕುಟುಂಬಸ್ಥರಿಗೆ ಮರಳಿ ಕಳುಹಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಹಿಳೆ ಪರಿಹಾರದ ಹಣವನ್ನು ಎಸೆದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿ ಎಂದು ಹಣ ಕೊಡುತ್ತೇವೆ. ಆ ಹಣ, ಅವರ ಕಷ್ಟಕ್ಕೆಲ್ಲ ಆಗುತ್ತೆ ಅಂತಲ್ಲ. ಮಾನವೀಯತೆ ದೃಷ್ಟಿಯಿಂದ ಕೊಡೋದು. ಏನಾದರೂ ಆದಾಗ ಸರ್ಕಾರದಿಂದ 1 ಲಕ್ಷ, 2 ಲಕ್ಷ ರೂ. ಪರಿಹಾರ ಕೊಡುವುದು ಸಾಮಾನ್ಯ ಎಂದು ಸ್ಪಷ್ಟಪಡಿಸಿದರು.
ಕೆರೂರ ಮತ್ತು ಕುಳಗೇರಿಯಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಅಲ್ಲದೇ, ಯಾರೂ ಕೂಡಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಉರಿಯುವ ಬೆಂಕಿ ಮೇಲೆ ಉಪ್ಪು ಸುರಿಯುವ ಕೆಲಸ ಕೂಡ ಮಾಡಬಾರದು. ನಾವೆಲ್ಲ ಜನಪ್ರತಿನಿಧಿಗಳು ಇರೋದೇ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲಿಕ್ಕೆ ಎಂದು ಮಾಜಿ ಸಿಎಂ ಹೇಳಿದರು.
ಹಲ್ಲೆಗೆ ಒಳಗಾದವರೆಲ್ಲ ಪಾಪ ಬಡವರು ಇದ್ದಾರೆ. ಎರಡು ಗುಂಪಿನ ಕಡೆಯವರನ್ನು ಭೇಟಿ ಮಾಡಿದ್ದೇನೆ. ಗಾಯಾಳುಗಳ ದಾಖಲಾದ ಎರಡೂ ಆಸ್ಪತ್ರೆಗಳಿಗೆ ಹೋಗಿ ಬಂದಿದ್ದೀನೆ. ಎರಡು ಕಡೆ ಕೂಡ ಪರಿಹಾರ ಕೊಟ್ಟಿರುವೆ ಎಂದು ತಿಳಿಸಿದರು.
ಇದಕ್ಕೂ ಮುಂಚೆ ಗಾಯಾಳು ಗೋಪಾಲ ಆರೋಗ್ಯ ವಿಚಾರಿಸಲು ಮಿರ್ಜಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ, ಗೋಪಾಲ ಕುಟುಂಬಸ್ಥಗೆ 50 ಸಾವಿರ ರೂ. ಪರಿಹಾರ ಹಣ ಸಿದ್ದರಾಮಯ್ಯ ಮುಂದಾದರು. ಆದರೆ, ಮೊದಲಿಗೆ ಗೋಪಾಲರ ತಾಯಿ ಜಯಶ್ರೀ ದಾಸಮನಿ, ಸಹೋದರ ಹಣ ಪಡೆಯಲು ನಿರಾಕರಿಸಿದರು. ನಂತರ ಸಿದ್ದರಾಮಯ್ಯ ಒತ್ತಾಯದ ಮೇರೆಗೆ ಗೋಪಾಲ ತಾಯಿ ಹಾಗೂ ಸಹೋದರ ಹಣ ಪಡೆದರು.
ಇದನ್ನೂ ಓದಿ: 'ನಮಗೆ ರೊಕ್ಕ ಬ್ಯಾಡ್ರಿ, ನ್ಯಾಯ ಬೇಕು': ಸಿದ್ದರಾಮಯ್ಯರ ವಾಹನದತ್ತ ಪರಿಹಾರದ ಹಣ ಎಸೆದು ಮಹಿಳೆಯ ಆಕ್ರೋಶ