ಬಾಗಲಕೋಟೆ: ಶ್ರೀಮಂತ ಮಕ್ಕಳಿಗೆ ಸಿಗುವ ಶಿಕ್ಷಣ ಮಾದರಿಯಲ್ಲಿಯೇ ಗುಡಿಸಲಿನಲ್ಲಿರುವ ಬಡ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕಾಗಿದೆ ಎಂದು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹೇಳಿದರು.
ನವನಗರದ ಪ್ರತಿಷ್ಠಿತ ತೇಜಸ್ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಗಂಡು, ಹೆಣ್ಣು ಎಂಬ ಬೇಧ ವಿಲ್ಲದೆ ಶಿಕ್ಷಣ ಜೊತೆಗೆ ಸಂಸ್ಕೃತಿ, ಆರೋಗ್ಯ ಎಲ್ಲರಿಗೂ ಸಮಾನವಾಗಿ ದೊರೆಯಬೇಕಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಅಗತ್ಯವಿದ್ದು, ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿಗಳು ಹೆಚ್ಚು ಅಭಿವೃದ್ಧಿಗೊಳ್ಳಬೇಕಿದೆ ಎಂದರು.
ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು ಕಂಡುಬರುತ್ತಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಕನಿಷ್ಠ 6 ತಿಂಗಳಿಗೆ ಒಮ್ಮೆ ಪ್ರವಾಸಿ ತಾಣ, ನಿಸರ್ಗ ಪರಿಸರದೆಡೆಗೆ ಕೊಂಡೊಯ್ಯುವುದರಿಂದ ಮಕ್ಕಳಲ್ಲಿ ಮನೋವಿಕಾಸ ವೃದ್ಧಿಯಾಗುತ್ತದೆ. ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪದ್ಧತಿ ಹೇಗಿರಬೇಕು ಎಂಬುದಕ್ಕೆ ಬೆಂಗಳೂರಿನ ಕಾರ್ಯಕ್ರಮ ಒಂದು ನಿರ್ದಶನವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೇಗೆ ಬೆಳೆಯಬೇಕು. ಯುವ ಪೀಳಿಗೆ ಮುಂದೆ ಹೇಗೆ ಅಭಿವೃದ್ದಿ ಹೊಂದಬೇಕು ಎಂದು ಪ್ರಧಾನಿ ಮಂತ್ರಿಗಳು ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ಶ್ಲಾಘನೆ ವ್ಯಕ್ತಪಡಿಸಿದ ರಾಜ್ಯಪಾಲರು: ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಬಗ್ಗೆ ಶ್ಲಾಘನೆ ವ್ಯಕ್ತಪಡಿದ ರಾಜ್ಯಪಾಲರು, ಸಕ್ಕರೆ ಕಾರ್ಖಾನೆಗಳು ಇಡೀ ರಾಷ್ಟ್ರದಲ್ಲಿಯೇ ಹೆಚ್ಚಿನ ಖ್ಯಾತಿ ಪಡೆದಿವೆ. ಸಕ್ಕರೆ ಕಾರ್ಖಾನೆಗಳ ಇತರ ಉತ್ಪನ್ನಗಳು ಸಹ ಹೊಸ ಹೊಸ ಪದ್ಧತಿ ಅಳವಡಿಸಿರುವುದು ಶ್ಲಾಘನೀಯ ವಿಷಯವಾಗಿದೆ. ಸಕ್ಕರೆಯ ಜೊತೆಗೆ ಎಥನಾಲ್, ಸಿಎನ್‍ಜಿ ಸೇರಿದಂತೆ 12 ಸಹ ಉತ್ಪಾದನೆಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಉತ್ಪಾದನೆಗಳ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳು ಆಗಬೇಕು. ಸಗಣಿಯ ಉಪಯೋಗ ಹೆಚ್ಚಾಗಬೇಕಿದೆ. ಸಗಣಿಯಿಂದ ಅನೇಕ ಉತ್ಪನ್ನಗಳನ್ನು ತಯಾರಿಕೆಯಿಂದ ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂದರು.
ಮಹಿಳೆಯರಿಗೆ ಆನಂದಿಬೆನ್ ಪಟೇಲ್ ಮಾದರಿ: ಬಳಿಕ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ ,ಶಿಕ್ಷಕಿಯಾಗಿ ಶಿಕ್ಷಣದ ಗುಣಮಟ್ಟ, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ಈಗ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮಾತೃ ಸ್ವರೂಪಿಣಿ ಆನಂದಿಬೇನ್ ಪಟೇಲ್ ಓರ್ವ ಪರಿಪೂರ್ಣ ಮಹಿಳೆಯಾಗಿದ್ದು, ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅನುಭವಿ ಹೊಂದಿರುವ ಆನಂದಿ ಬೆನ್ ಅವರು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಕನಸು ಹೊಂದಿದ್ದಾರೆ ಎಂದರು.
ಅವರ ಆಗಮದಿಂದ ಜಿಲ್ಲೆಯ ಮಹಿಳೆಯರ ಮಕ್ಕಳ ಸ್ಫೂರ್ತಿ ತುಂಬಲೆಂಬ ದೃಷ್ಟಿಯಿಂದ ಜಿಲ್ಲೆಗೆ ಕರೆತರಲಾಗಿದೆ. ಅವರ ಪ್ರೇರಣೆಯಿಂದ ಮುಂಬರುವ ದಿನಗಳಲ್ಲಿ ನಿರಾಣಿ ಉದ್ಯಮ ಸಮೂಹದಿಂದ ಒಂದು ಕಾರ್ಖಾನೆಗಳಿಂದ ಪ್ರಾರಂಭಗೊಂಡ ಉದ್ಯಮ 100 ಕಾರ್ಖಾನೆ ಸ್ಥಾಪಿಸುವತ್ತ ಮುನ್ನಡೆಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯನ್ನು ಮೈಸೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ನಂತರ ಸಂಸದ ಸಿದ್ದೇಶ್ವರ್ ಮಾತನಾಡಿ, ಕೇವಲ ಒಂದು ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮೂಲಕ ಪ್ರಾರಂಭದಲ್ಲಿ 500 ರಿಂದ ಇಂದು ಲಕ್ಷಾಂತರ ಟನ್ ಕಬ್ಬು ನುರಿಸುತ್ತಿದ್ದಾರೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಎಥನಾಲ್ ಉತ್ಪಾದಿಸುವ ಮೂಲಕ ದೇಶದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಗೆ ಅಪಾರ ಕೊಡುವ ನೀಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಸಹ ಮಾಡಿದ್ದಾರೆ. ಇದಕ್ಕೆ ಅವರ ಕುಟುಂಬದ ಎಲ್ಲ ಸದಸ್ಯರು ಸಾಥ್ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರದಲ್ಲಿ ತೇಜಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಕಾಶ ತಪಶೆಟ್ಟಿ, ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ನಾರಾಯಣಸಾ ಭಾಂಡಗೆ ಸೇರಿದಂತೆ ವಿಜಯ ನಿರಾಣಿ, ಮಾಧುರಿ ಮುಧೋಳ, ಅನಾರಿಬೇನ್, ಶಹ, ಭಗವಾನದಾಸ್ ಜಾಜು ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಾಳೆ - ನಾಡಿದ್ದು ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರಿಗೆ ಆಗಮನ: ನಗರದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ