ಬಾಗಲಕೋಟೆ : ಮುಧೋಳ ಪಟ್ಟಣ ನಿವಾಸಿ ಓಂಕಾರ್ ಕುಲಕರ್ಣಿ ಹುಬ್ಬಳ್ಳಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ನಂತರ ಯಾವುದಾದ್ರೂ ನೌಕರಿ ಮಾಡಬೇಕು ಎಂದು ಊರಿಗೆ ಬಂದರು. ಆದರೆ, ಕೊರೊನಾ ಲಾಕ್‌ಡೌನ್‌ನಿಂದ ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಗಿರಲಿಲ್ಲ. ಇದೇ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.
7 ಏಕರೆ ಜಮೀನಿನಲ್ಲಿ ಬಾಳೆ ಬೆಳೆದು ಈಗ ಲಕ್ಷಾಂತರ ರೂಪಾಯಿಗಳ ಲಾಭ ಪಡೆಯುತ್ತಿದ್ದಾರೆ ಯುವಕ ಓಂಕಾರ್ ಕುಲಕರ್ಣಿ. ಇವರು ಬೆಳೆದ ಬಾಳೆಹಣ್ಣು ಇರಾನ್, ಇರಾಕ್ ದೇಶಕ್ಕೆ ರಪ್ತು ಮಾಡಲು ಸಿದ್ಧತೆ ನಡೆಸಿದ್ದಾನೆ.
ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ ಹೋದಲ್ಲಿ ವರ್ಷಕ್ಕೆ 3 ಲಕ್ಷದವರೆಗೆ ಸಂಬಳ ಪಡೆಯಬಹುದು. ಆದರೆ, ಕೃಷಿಯನ್ನು ಮಾಡುವ ಮೂಲಕ ವರ್ಷಕ್ಕೆ 30 ಲಕ್ಷ ರೂ. ಆದಾಯ ಪಡೆದುಕೊಳ್ಳುವಂತಾಗಿದೆ.
ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬಳಿ ಇವರದ್ದು ಒಟ್ಟು 12 ಏಕರೆ ಜಮೀನು ಇದೆ. ಇದರಲ್ಲಿ ಏಳು ಏಕರೆ ಪ್ರದೇಶದಲ್ಲಿ ಜಿ-9 ತಳಿ ಬಾಳೆ ಬೆಳೆಸಿದ್ದಾರೆ. ಇವರ ತಂದೆ ಉದಯ ಕುಲಕರ್ಣಿಗೆ ತಮ್ಮ ಪುತ್ರ ಕಂಪನಿಯಲ್ಲಿ ಕೆಲಸ ಮಾಡೋದು ಇಷ್ಟ ಇರಲಿಲ್ಲವಂತೆ. ಇದ್ದ ಜಮೀನಿನಲ್ಲಿ ತಾಂತ್ರಿಕವಾಗಿ ಹಾಗೂ ಕೆಲ ರೈತ ಮುಖಂಡರ ಸಲಹೆ ಮೇರೆಗೆ ಕೃಷಿಯಲ್ಲಿ ಉತ್ತಮ ಸಂಪಾದನೆ ಮಾಡ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಬಾಳೆ ಬೆಳೆಗೆ ಹನಿ ನೀರಾವರಿ ಮಾಡಿದ್ದಾರೆ. ಗುಣಮಟ್ಟದ ಔಷಧ, ಗೊಬ್ಬರ ಬಳಸಿ ಉತ್ತಮ ಫಸಲು ಬರುವಂತೆ ಮಾಡಿದ್ದಾರೆ. ವಿಜಯಪುರ ಕಂಪನಿಯ ವತಿಯಿಂದ ಈ ಬಾಳೆಹಣ್ಣನ್ನು ಇರಾನ್, ಇರಾಕ್‌ಗೆ ರಪ್ತು ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ವಿದೇಶಿ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸ್ಥಳದಲ್ಲಿಯೇ ಪ್ರತಿ ಕೆಜಿಗೆ 11.50 ರೂಪಾಯಿಗೆ ಮಾರಾಟ ಆಗಿದೆ.
ಬಾಳೆಹಣ್ಣು ಉತ್ತಮ ಗುಣಮಟ್ಟದಲ್ಲಿ ಇದ್ದರೆ ಮಾತ್ರ ವಿದೇಶಕ್ಕೆ ರಪ್ತು ಆಗುತ್ತದೆ. ಕುಲಕರ್ಣಿ ಬೆಳೆದಿರುವ ಬಾಳೆ ಗೊನೆ ಸುಮಾರು 35 ಕೆಜಿಯಷ್ಟಿದ್ದು, ಲಕ್ಷಾಂತರ ರೂಪಾಯಿಗಳ ಲಾಭ ಆಗಲಿದೆ. ಇಂಜಿನಿಯರಿಂಗ್ ಮಾಡಿ ವಿದೇಶಕ್ಕೆ ಕೆಲಸಕ್ಕೆ ಹೋದರು ವರ್ಷಕ್ಕೆ 30 ಲಕ್ಷ ಆದಾಯ ಬರಲ್ಲ. ಕುಟುಂಬದವರೊಂದಿಗೆ ಇದ್ದುಕೊಂಡೇ ಕೃಷಿ ನೂತನ ತಂತ್ರಜ್ಞಾನ ಅಳವಡಿಸಿ ಲಕ್ಷಾಂತರ ರೂಪಾಯಿಗಳ ಆದಾಯ ಪಡೆಯುತ್ತಿರುವ ಈತ ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಪರಿಸರದ ಮೇಲೆ ಪ್ರೇಮ: ಶಾಲೆಯಲ್ಲೇ ಉದ್ಯಾನ ನಿರ್ಮಿಸಿದ ಶಿಕ್ಷಕ ದಂಪತಿ