ಬಾಗಲಕೋಟೆ: ಬೀಳಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಠರೋಗ ವಿಭಾಗದ ಜಂಟಿ ನಿರ್ದೇಶಕ ಡಾ. ಮುನಿರಾಜು ಕೆ.ಎಂ. ಭೇಟಿ ನೀಡಿ ಕುಷ್ಠರೋಗಿಗಳ ವಿವರ ಹಾಗೂ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಅವರು, ಕುಷ್ಠರೋಗವನ್ನು ಗುಣಪಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮನೆ ಮನೆಗೆ ಭೇಟಿ ನೀಡಿ ರೋಗಿಗಳಲ್ಲಿ ಅರಿವು ಮೂಡಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವಂತೆ ಮಾಡಬೇಕು. ಸರ್ಕಾರದಿಂದ ಈ ರೋಗಕ್ಕೆ ಉಚಿತ ಔಷಧಿ ವಿತರಿಸಲಾಗುತ್ತಿದ್ದು, ಪ್ರಥಮ, ದ್ವಿತೀಯ ಹಂತದಲ್ಲಿರುವ ರೋಗದ ಪ್ರಮಾಣ ಪರೀಕ್ಷಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಪ್ರಥಮದಲ್ಲಿಯೇ ಈ ರೋಗಕ್ಕೆ ಚಿಕಿತ್ಸೆ ಪಡೆದದ್ದೇ ಆದಲ್ಲಿ ಈ ರೋಗದಿಂದ ಬರುವ ಅಂಗವೈಕಲ್ಯವನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಬೇಕು ಎಂದರು. ಹಿಂದಿನ ಕಾಲದಲ್ಲಿ ಭಯಾನಕ ರೋಗ ಎನಿಸಿಕೊಂಡ ಕುಷ್ಠರೋಗಕ್ಕೆ ಯಾವುದೇ ತರಹದ ಔಷಧಿ ಇರಲಿಲ್ಲ. ಸ್ಪರ್ಶ ಸೋಂಕು ರೋಗವೆಂದು ತಿಳಿದು ಅವರನ್ನು ಊರಿನ ಆಚೆ ಇಡುವ ಅನಿಷ್ಠ ಪದ್ಧತಿ ಇತ್ತು. ಆದರೆ ಇಂದು ಈ ರೋಗವನ್ನು ಸಂಪೂರ್ಣ ಗುಣಪಡಿಸಬಲ್ಲ ಚಿಕಿತ್ಸೆ ನೀಡಲಾಗುತ್ತಿದ್ದು, ಈ ರೋಗಕ್ಕೆ ತುತ್ತಾದ ರೋಗಿಗಳು ಯಾವುದೇ ಭಯ ಹಾಗೂ ಸಂಕೋಚಕ್ಕೆ ಒಳಗಾಗದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಮಾತ್ರೆಗಳನ್ನು ಪಡೆದು ಗುಣಮುಖರಾಗುವಂತೆ ಸೂಚನೆ ನೀಡಿದರು.
ರೋಗಿಗಳು ಒಮ್ಮೆ ದಾಖಲಾಗಿ ರೋಗವಿರುವ ಬಗ್ಗೆ ಖಚಿತವಾದಲ್ಲಿ ಇಲಾಖೆ ಸಿಬ್ಬಂದಿ ಅವರ ಮನೆಗೆ ತೆರಳಿ ಮಾತ್ರೆ ನೀಡುವುದರ ಜೊತೆಗೆ ಆಪ್ತ ಸಮಾಲೋಚನೆ ನಡೆಸಿ ರೋಗಿಯಲ್ಲಿ ಅಡಗಿರುವ ಭಯವನ್ನು ದೂರ ಮಾಡಲಾಗುವುದು ಎಂದರು.