ಬಾಗಲಕೋಟೆ: ವಿನಾ ಕಾರಣ ಆರೋಪ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಅವರಿಗೆ ಅಧಿಕಾರವಿಲ್ಲದೆ ಮತಿಭ್ರಮಣೆ ಆಗಿದೆ ಎಂದು ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದ್ದಾರೆ.
ನವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಹುನಗುಂದ ಮತಕ್ಷೇತ್ರದಲ್ಲಿ ನನಗೆ ಸಂಬಂಧವಿರದ ಯಾರಾದರೂ ಅಕ್ರಮ ಮಾಡಿದರೆ, ನನ್ನ ಮೇಲೆ ಸುಳ್ಳು ಆರೋಪ ಮಾಡಿ, ರಾಜಕೀಯ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಇದೇ ರೀತಿ ಸುಳ್ಳು ಆರೋಪ ಮಾಡಿದರೆ ಕಾನೂನು ಪ್ರಕಾರ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ. ಈ ಹಿಂದೆ ಅವರ ಅಧಿಕಾರದಲ್ಲಿ ಗುಂಡಾಗಿರಿ, ಅಕ್ರಮ ಅಕ್ಕಿ ಸಾಗಣೆ, ಅಕ್ರಮ ಮರಳು ಸಾಗಣಿಕೆ ನಡೆದಿದೆ ಎಂದು ಆರೋಪಿಸಿರುವ ಶಾಸಕರು, ಅವರು ಮಾಡಿದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ಸುಳ್ಳಾದರೆ ವಿಜಯಾನಂದ ಕಾಶಪ್ಪನವರ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಸವಾಲು ಎಸೆದರು.
ಬಿಜೆಪಿ ಸರ್ಕಾರದ ಹನಿ ನೀರಾವರಿ ಯೋಜನೆಯನ್ನು ಹಳ್ಳ ಹಿಡಿಯುವಂತೆ ಮಾಜಿ ಶಾಸಕರು ಮಾಡಿದ್ದಾರೆ. ರೈತರಿಗೆ ವರದಾನ ಆಗಬೇಕಾಗಿದ್ದ ಯೋಜನೆಯು ಅವ್ಯವಹಾರದಿಂದ ಹಳ್ಳ ಹಿಡಿದಿದ್ದು ಈಗ ಸರ್ಕಾರ ತನಿಖೆ ಆದೇಶ ಮಾಡಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.