ಬಾಗಲಕೋಟೆ: ಶುಚಿ ಯೋಜನೆಯಡಿ ಮಹಿಳೆಯರಿಗೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ನೀಡುವ ಸ್ಯಾನಿಟರಿ ನ್ಯಾಪ್ಕಿನ್ಗಳು ನಿಗದಿತ ಅವಧಿಯೊಳಗೆ ವಿತರಣೆಯಾಗದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಚಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಬಂದಂತಹ ಸ್ಯಾನಿಟರಿ ನ್ಯಾಪ್ಕಿನ್ಗಳು ವಿತರಣೆಗಾಗಿ ವಿವಿಧ ಇಲಾಖೆಗೆ ರಸಬರಾಜು ಆಗಬೇಕು. ವಿತರಿಸಿದ ಬಗ್ಗೆ ದಾಖಲೆ ಇಡಬೇಕು. ಸರಬರಾಜಾದ 7 ದಿನಗಳಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ವಿತರಣೆಯಾದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಮಿತಿಗೆ, ತಾಲೂಕು ಹಂತದಲ್ಲಿ ತಾಲೂಕು ಸಮಿತಿಯ ಗಮನಕ್ಕೆ ತರಲು ಸೂಚಿಸಿದರು.
ಇತ್ತೀಚೆಗೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ಗಳನ್ನು ವಿತರಣೆ ಮಾಡದಿರುವುದು ಕಂಡು ಬಂದಿದ್ದು, ಜನವರಿ ತಿಂಗಳಲ್ಲಿ 4 ಲಕ್ಷ ನ್ಯಾಪ್ಕಿನ್ಗಳಿದ್ದರೂ ವಿತರಿಸದೆ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಇಡಲಾಗಿತ್ತು. ಅಲ್ಲದೆ 2019-20ನೇ ಸಾಲಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಬಂದಿದ್ದ ಆರೋಗ್ಯ ಕಿಟ್ ವಿತರಿಸದೆ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ತುರ್ತಾಗಿ ಸಭೆ ಕರೆದಿರುವುದಾಗಿ ತಿಳಿಸಿದರು.
ಶುಚಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಡಾ. ಬಿ.ಜಿ.ಹುಬ್ಬಳ್ಳಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈಗ ದಾಸ್ತಾನು ಸರಬರಾಜು ಆಗಿ ನ್ಯಾಪ್ಕಿನ್ ವಿತರಣೆಗೊಳ್ಳುತ್ತಿವೆ. ಉಳಿದ ತಾಲೂಕುವಾರು ವಿತರಣೆಗೆ ಬಾಕಿ ಇದ್ದರೆ ತಕ್ಷಣ ವಿತರಣೆ ಮಾಡಲು ಸೂಚಿಸಿದರು.