ಬಾಗಲಕೋಟೆ: ಗ್ರಾಮ ಪಂಚಾಯತ್ಗಳಲ್ಲಿ ಸ್ತ್ರೀಶಕ್ತಿ ಒಕ್ಕೂಟಗಳಿಗೆ ಹಲವು ಅವಕಾಶಗಳಿವೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು. ಜಿಲ್ಲಾ ಪಂಚಾಯತ್ ಸಭಾಭವನದಲ್ಲಿಂದು ನಡೆದ ಸ್ತ್ರೀಶಕ್ತಿ ಒಕ್ಕೂಟಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂ ವತಿಯಿಂದ ವಿಶೇಷ ಚೇತನರ ಶೇ. 5ರಷ್ಟು ಅನುದಾನದಡಿ ತಾಲೂಕಿಗೆ ಒಂದರಂತೆ ಆಯಾ ತಾಲೂಕಿನ ಉತ್ತಮ ಸ್ತ್ರೀಶಕ್ತಿ ಒಕ್ಕೂಟಗಳಿಗೆ ವಾಹನ ಖರೀದಿ ಮಾಡಿ ನೀಡಲಾಗುತ್ತದೆ.
ಈ ವಾಹನದಿಂದ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಂಚಾರಕ್ಕೆ ಕಡಿಮೆ ದರದಲ್ಲಿ ಉತ್ತಮ ಸೇವೆ ಕೊಡಬೇಕು. ಈ ವಾಹನದಿಂದ ಗ್ರಾಮೀಣ ಭಾಗದ ವಿಶೇಷ ಚೇತನರಿಗೆ ಅನುಕೂಲವಾಗಬೇಕು. ಇದರಿಂದ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.
ಅಲ್ಲದೆ ಮನೆ ಮನೆಯಿಂದ ಕಸವನ್ನು ಸಹ ಸಂಗ್ರಹಿಸುವ ಕೆಲಸಕ್ಕೂ ಒಕ್ಕೂಟಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ ಸ್ತ್ರೀಶಕ್ತಿ ಒಕ್ಕೂಟದ ಸದಸ್ಯರಿಗೆ ಮಣ್ಣು ಪರೀಕ್ಷೆ ಮಾಡುವ ಒಂದು ವಾರದ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಈ ತರಬೇತಿ ಪಡೆದು ತಮ್ಮ ಗ್ರಾಮೀಣ ವ್ಯಾಪ್ತಿಯ ರೈತರ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ಯಾವ ಬೆಳೆ ಬೆಳೆಯಬೇಕೆಂಬ ಮಾಹಿತಿ ನೀಡಲು ಅನುಕೂಲವಾಗುತ್ತದೆ.
ತರಬೇತಿ ನೀಡಲು ಜಿಲ್ಲಾ ಜಂಟಿ ನಿರ್ದೇಶಕರಿಗೆ ತಿಳಿಸಲಾಗಿದೆ. ಇದರಿಂದ ರೈತರು ಮಣ್ಣಿನ ಪರೀಕ್ಷಾ ಕೇಂದ್ರಕ್ಕೆ ಅಲೆದಾಡುವುದು ತಪ್ಪುತ್ತದೆ. ವಿಶೇಷ ಚೇತನರು ಬಳಸಲು ನುಕೂಲವಾಗುವ ರೀತಿಯಲ್ಲಿ ಶೌಚಾಲಯಗಳನ್ನು ಸಹ ನಿರ್ಮಿಸಿಕೊಳ್ಳಲು ಅವಕಾಶವಿದೆ. ಒಕ್ಕೂಟಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಮಾರಾಟ ಮಳಿಗೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದರು.
ಸಂಸದರ ಅನುದಾನದಡಿ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದ ಜಿಲ್ಲೆಯ ಉತ್ತಮ 5 ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಒಟ್ಟು 5 ಲಕ್ಷ ರೂ.ಗಳ ಚೆಕ್‍ನ್ನು ಜಿಪಂ ಸಿಇಒ ಗಂಗೂಬಾಯಿ ಮಾನಕರ ವಿತರಿಸಿದರು. ಇಂದಿರಾ ಗಾಂಧಿ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ, ಕಟಗೇರಿ, ದುರ್ಗಾ ಪರಮೇಶ್ವರಿ ಗ್ರಾಪಂ ಒಕ್ಕೂಟ ಮಹಿಳಾ ಸಂಘ, ರಕ್ಕಸಗಿ, ಆಶಾ ದೀಪ ಮಹಿಳಾ ಸ್ವ-ಸಹಾಯ ಸಂಘ ಗದ್ದನಕೇರಿ, ಸರಸ್ವತಿ ಸ್ವ-ಸಹಾಯ ಸಂಘ ಗಲಗಲಿ ಹಾಗೂ ಭವಾನಿ ಸ್ವ-ಸಹಾಯ ಮಹಿಳಾ ಸೊಸೈಟಿ ಭಂಟನೂರ ಇವರಿಗೆ ಚೆಕ್ ವಿತರಿಸಲಾಯಿತು.