ಬಾಗಲಕೋಟೆ : ನಿರಾಣಿ ಉದ್ಯಮ ಸಮೂಹ ದೇಶದಲ್ಲಿಯೇ ಮೊದಲು ತ್ಯಾಜ್ಯವನ್ನು ಬಳಸಿ ನೌಕಾ ಮತ್ತು ವಿಮಾನಯಾನಕ್ಕೆ ಉಪಯೋಗವಾಗುವ ಇಂಧನ ಮತ್ತು ಸಿಎನ್‌ಜಿ ಗ್ಯಾಸ್ ಉತ್ಪಾದನೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ವರ್ಚುವಲ್ ಮೂಲಕ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಕೃಷಿ ಆಧಾರಿತ ಕೈಗಾರಿಕೆ ಬೆಳೆಯುವುದರಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ತಾವು ಬಾಗಲಕೋಟೆ ಮತ್ತು ನಿರಾಣಿ ಕಾರ್ಖಾನೆಗೆ ಭೇಟಿ ನೀಡುವುದಾಗಿ ತಿಳಿಸಿದರು.
ಆಧುನಿಕ ತಂತ್ರಜ್ಞಾನ ಬಹಳ ಬೆಳೆದಿದೆ. ವಿಜ್ಞಾನ ರಂಗದಲ್ಲಿ ಹೊಸ ಅವಿಷ್ಕಾರಗಳು ನಡೆದಿವೆ. ಇವುಗಳನ್ನೆಲ್ಲ ನಮ್ಮ ಕೇಂದ್ರ ಸರ್ಕಾರ ಬಳಸಿಕೊಂಡು ದೇಶ ಮುನ್ನಡೆಸುತ್ತಿದೆ. ಸಕ್ಕರೆ ಕಾರ್ಖಾನೆಯಿಂದ 1 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ಒಂದು ದಾಖಲೆ ಎಂದು ಶ್ಲಾಘಿಸಿದರು. ನಿರಾಣಿ ಉದ್ಯಮ ಸಮೂಹದ ಅಧ್ಯಕ್ಷ, ಶಾಸಕ, ಮುರುಗೇಶ ನಿರಾಣಿ ವೆಬಿನಾರ್‌ನಲ್ಲಿ ಮಾತನಾಡಿ, ಹೊಸ ಘಟಕ 500 ಯುವಕರಿಗೆ ಉದ್ಯೋಗ ಕಲ್ಪಿಸಲಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರು, ನಿರಾಣಿ ಕಾರ್ಖಾನೆ ಉತ್ಪಾದಿಸಿ ಸಂಸ್ಕರಿಸಿದ ಉತ್ತಮ ಗುಣಮಟ್ಟದ 1 ಕೆಜಿ, 2 ಕೆಜಿ ಹಾಗೂ 5 ಕೆಜಿ ಪಾಕೇಟ್‌ಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿರಾಣಿ ಉದ್ಯಮ ಸಮೂಹ ತ್ಯಾಜ್ಯ ಬಳಸಿ ಇಂಧನ ಉತ್ಪಾದಿಸುವುದಕ್ಕೆ ಮುಂದಾಗಿರುವುದು ಒಂದು ಹೊಸ ಮೈಲುಗಲ್ಲು ಆಗಿದೆ ಎಂದು ಹೇಳಿದರು.