ಬಾಗಲಕೋಟೆ: ಬೆಳ್ಳಂಬೆಳಗ್ಗೆ ಹಳೇ ನಗರದಲ್ಲಿ ನಗರಸಭೆ ವತಿಯಿಂದ ಅಕ್ರಮ ಕಟ್ಟಡ ತೆರೆವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಡಬ್ಬಾ ಅಂಗಡಿ ಹಾಗೂ ರಸ್ತೆಯ ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾದರು. ಈ ಸಮಯದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಬಾಗಲಕೋಟೆ ನಗರದ ಹಳೇ ಅಂಜುಮನ್ ರಸ್ತೆಯ ಇಕ್ಕೆಲಗಳಲ್ಲಿರೋ ಅಕ್ರಮ ಕಟ್ಟಡಗಳ ತೆರೆವು ಕಾರ್ಯಾಚರಣೆಯನ್ನು ನಗರಸಭೆ ಆಯುಕ್ತ ಮುನಿಸ್ವಾಮಪ್ಪ ನೇತೃತ್ವದಲ್ಲಿ ನಡೆಸಲಾಯಿತು. ಸ್ಥಳೀಯರ ವಿರೋಧದ ಹಿನ್ನೆಲೆ, ಪೊಲೀಸ್ ಭದ್ರತೆಯೊಂದಿಗೆ ನಗರಸಭೆ ಅಧಿಕಾರಿಗಳು ತೆರುವು ಕಾರ್ಯಾಚರಣೆ ನಡೆಸಿದರು. ನಗರಸಭೆ ಅಧಿಕಾರಿಗಳ ನಡೆಗೆ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾದರೂ ಸಹ ಯಾವುದಕ್ಕೂ ಬಗ್ಗದೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡ ಹಾಗೂ ಡಬ್ಬಾ ಅಂಗಡಿಗಳ ತೆರೆವು ಮಾಡಿದರು.
ಕೊರೊನಾ ಸಮಯದಲ್ಲಿ ತೆರವು ಬೇಡ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅವರು ಮಾತು ಕೇಳದೇ ಕಾರ್ಯಾಚರಣೆಗೆ ಮುಂದಾದರು. ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ ನೇತೃತ್ವದಲ್ಲಿ ನಗರಸಭೆಗೆ ಮನವಿ ಮಾಡಲಾಯಿತು. ಮೊದಲೇ ಕೊರೊನಾದಿಂದ ಬೀದಿ ಪಾಲಾಗಿರುವ ಜನತೆಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಕೊರೊನಾ ಮುಗಿದ ಬಳಿಕ ಮಾಡಬಹುದು ಎಂದು ಮನವಿ ಮಾಡಿಕೊಂಡರು.
ನಗರದ ಸೌಂದರ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಹಿನ್ನೆಲೆ, ಬಾಗಲಕೋಟೆ, ನವನಗರ, ವಿದ್ಯಾಗಿರಿ ಸೇರಿದಂತೆ ಎಲ್ಲಿಯೂ ಅಕ್ರಮವಾಗಿ ಡಬ್ಬಾ ಹಾಗೂ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಎಲ್ಲ ಕಡೆ ತೆರೆವುಗೊಳಿಸಲಾಗಿದೆ. ಇಲ್ಲಿಯೂ ಸಹ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ಸ್ಪಷ್ಟ ಪಡಿಸಿದರು.
ಇದನ್ನೂ ಓದಿ: ಪರಿಶಿಷ್ಟರ ಕಲ್ಯಾಣಕ್ಕಾಗಿ 26,005 ಕೋಟಿ ರೂ ಹಂಚಿಕೆ: ಸಚಿವ ಬಿ.ಶ್ರೀರಾಮುಲು
ಇದೇ ಸಮಯದಲ್ಲಿ ನಾವೇ ಮನೆ ತೆರವು ಮಾಡಿಕೊಳ್ಳುತ್ತೇವೆ. ಜೆಸಿಬಿಯಿಂದ ಹಾಳು ಮಾಡಬೇಡಿ ಎಂದು ಮಹಿಳೆಯೊಬ್ಬರು ಪರಿಪರಿಯಾಗಿ ಬೇಡಿಕೊಂಡು ಕಣ್ಣೀರು ಹಾಕಿದ ಘಟನೆ ಕೂಡ ಜರುಗಿತು.