ಬಾಗಲಕೋಟೆ: ಇಷ್ಟು ದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದ್ದ ಮಾವಿನ ಹಣ್ಣಿನ ಬೆಲೆ ಇದೀಗ ಕಡಿಮೆ ಬೆಲೆಗೆ ಸಿಗುವಂತಾಗಿದೆ.
ಕೆಲ ದಿನಗಳ ಹಿಂದೆ ನಗರದಾದ್ಯಂತ ಒಂದು ಡಜನ್ ಮಾವಿನ ಹಣ್ಣನ್ನು ಬರೋಬ್ಬರಿ 500 ರಿಂದ 1000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಅದೇ ಒಂದು ಡಜನ್ ಹಣ್ಣಿನ ಬೆಲೆ 50 ರೂ.ಗಳಿಂದ 300 ರೂಪಾಯಿ ಅಗಿದೆ.
ಮಾವಿನ ಬೆಳೆ ಈ ಬಾರಿ ಉತ್ತಮವಾಗಿ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಅಲ್ಲದೇ ಕೈಗೆಟುವ ದರದಲ್ಲಿ ಸಿಗುತ್ತಿರುವುದರಿಂದ ಬಡ ಕುಟುಂಬದವರೂ ಸಹ ಈಗ ಹಣ್ಣನ್ನು ತಿನ್ನುತ್ತಿದ್ದಾರೆ.
ರಬಕವಿ-ಬನಹಟ್ಟಿ ಅವಳಿ ನಗರಾದ್ಯಂತ ಕೂಲಿ ಹಾಗೂ ನೇಕಾರರೇ ಹೆಚ್ಚಿನ ಪ್ರಮಾಣದಲ್ಲಿದ್ದು, ದುಡಿದಾಗಲೇ ಹೊಟ್ಟೆ ತುಂಬುವ ಕಾಲದಲ್ಲಿ ಬಹುತೇಕ ಕುಟುಂಬಗಳಿಗೆ ಮಾವು ಗಗನಕುಸುಮವಾಗಿತ್ತು. ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಮಾವು ಆಗಮಿಸುತ್ತಿರುವುದಲ್ಲದೆ, ಕೈಗೆಟುಕುವ ದರದಲ್ಲಿ ಮಾವು ದೊರಕುತ್ತಿರುವುದು ಸಮಾಧಾನ ತರುವಲ್ಲಿ ಕಾರಣವಾಗಿದೆ.