ಬಾಗಲಕೋಟೆ: ಜಮಖಂಡಿ ನಗರದ ಸಮೀಪ ಇರುವ ಕಟ್ಟಿಕೆರೆ ಬಳಿಯ ಗುಡ್ಡದ ತಿರುವು ರಸ್ತೆ ಕಾಮಗಾರಿಯನ್ನು ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಡಿಸಿಎಂ, ಕಾಮಗಾರಿಯನ್ನು ಉತ್ತಮ ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಭಾರಿ ವಾಹನಗಳು ಹಾಗೂ ಕಬ್ಬಿನ ಟ್ರ್ಯಾಕ್ಟರ್ ಸಂಚರಿಸಲು ತೀವ್ರ ತೊಂದರೆಯಾಗಿದ್ದರಿಂದ ಸುಗಮ ಸಂಚಾರಕ್ಕಾಗಿ ಕಟ್ಟಿಕೆರೆ ಬಳಿ ಇರುವ ಗುಡ್ಡವನ್ನು 4.5 ಮೀಟರ್ ಆಳ ಕೊರೆದು, 530 ಮೀಟರ್ ಉದ್ದ ಹಾಗೂ 18 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.
ಲೋಕೋಪಯೋಗಿ ಇಲಾಖೆಯ ವಲಯವಾದ ರಸ್ತೆ ಮತ್ತು ಆಸ್ತಿ ನಿರ್ವಹಣಾ ಕೇಂದ್ರ ( ಪ್ರಾನ್ಸಿ) ಈ ಕಾಮಗಾರಿಯನ್ನು ಫೆಬ್ರವರಿ 2020 ರಲ್ಲಿ ಪ್ರಾರಂಭಿಸಿದೆ. ಈ ಹಿಂದೆ ಪ್ರಸ್ತಾವನೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಗುಡ್ಡವನ್ನು 1 ಮೀಟರ್ ಆಳ ಕೊರೆದು ತಿರುವು ರಸ್ತೆ ನಿರ್ಮಿಸುವಂತೆ ಯೋಜನೆ ಹೊಂದಲಾಗಿತ್ತು. ಒಂದು ಮೀಟರ್ ಗುಡ್ಡಕೊರೆದು ತಿರುವು ನಿರ್ಮಿಸಿದರೂ ಕಬ್ಬಿನ ಟ್ರ್ಯಾಕ್ಟರ್ ಸಂಚಾರಕ್ಕೆ, ರೈತರಿಗೆ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದಿಲ್ಲ ಎನ್ನುವುದನ್ನು ಅಧ್ಯಯನ ಮಾಡಿ ಸುಲಲಿತ ಸಂಚಾರಕ್ಕಾಗಿ ಗುಡ್ಡವನ್ನು 4.5 ಮೀಟರ್ ಆಳಕ್ಕೆ ಕೊರೆದು ತಿರುವು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ರು.
ಗುಡ್ಡಕೊರೆಯುವ ಆಳವನ್ನು 4.5ಕ್ಕೆ ವಿಸ್ತರಿಸಿರುವುದರಿಂದ ಹೆಚ್ಚುವರಿಯಾಗಿ 2.90 ಕೋಟಿ ಹೆಚ್ಚುವರಿಯಾಗಿ ಅನುದಾನದ ಅಗತ್ಯವಿದ್ದು, ಈ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಈ ರಸ್ತೆಯು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪರ್ಯಾಯ ಮಾರ್ಗವಿಲ್ಲದೇ ರೈತರಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಅರಣ್ಯ ಇಲಾಖೆಯ ಸಹಮತಿಯೊಂದಿಗೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯ ಪ್ರಗತಿಯ ಬಗ್ಗೆ ತೀವ್ರ ನಿಗಾವಹಿಸಿ, ಗುಣಮಟ್ಟದೊಂದಿಗೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದ್ರು.