ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಮುಖ್ಯಮಂತ್ರಿ ಆಗುವ ವಿಚಾರವಾಗಿ ನಡೆದಿರುವ ಚರ್ಚೆ ಹಿನ್ನಲೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಎಮ್ಮೆ ಜನಿಸುವ ಕಥೆ ಹೇಳಿ ಹ್ಯಾಸ್ಯಾಸ್ಪದ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಮ್ಮೂರಿನಲ್ಲಿ ಚರಂತಿಮಠ ಎಂಬ ಸಾಹುಕಾರರ ಮನೆಯಲ್ಲಿ ಎರಡು ಎಮ್ಮೆಗಳಿದ್ದವು, ಅವುಗಳಿಗೆ ಸದ್ಯದಲ್ಲಿ ಡೆಲಿವರಿ ಆಗುತ್ತದೆ ಎಂದು ತಿಳಿದ ಕೆಲಸಗಾರನೊಬ್ಬ ತನ್ನ ದಪ್ಪ ಮೀಸೆಯನ್ನು ತೆಗೆಸಿದ್ದ.
ಆತನನ್ನ ಮೀಸೆ ಏಕೆ ತೆಗೆಸುತ್ತೀಯಾ ಎಂದು ಪ್ರಶ್ನಿಸಿದ್ದಕ್ಕೆ, ನಮ್ಮ ಸಾಹುಕಾರರ ಮನೆಯ ಎಮ್ಮೆಗಳಿಗೆ ಡೆಲಿವರಿ ಆದ ನಂತರ ಅವರು ಮಜ್ಜಿಗೆ ಕೊಡುತ್ತಾರೆ. ಅದನ್ನು ಕುಡಿಯುವಾಗ ಮೀಸೆಗೆ ಅಂಟುತ್ತದೆ. ಹಾಗಾಗಿ ಮೀಸೆಯನ್ನು ಬೋಳಿಸು ಎಂದು ಕ್ಷೌರಿಕನಿಗೆ ಹೇಳುತ್ತಾನೆ.
ಆದರೆ, ದುರಾದೃಷ್ಟವಶಾತ್ ಸಾಹುಕಾರರ ಮನೆ ಎಮ್ಮೆಗೆ ಡೆಲಿವರಿ ಆಗಲಿಲ್ಲ. ಅವರು ಮಜ್ಜಿಗೆಯನ್ನೂ ಕೊಡಲಿಲ್ಲ. ಇಲ್ಲಿ ಬಡವನ ಮೀಸೆ ಮಾತ್ರ ಬೋಳಾಯಿತು. ಇದೇ ರೀತಿ ಕಾಂಗ್ರೆಸ್ ಸ್ಥಿತಿ ಆಗಿದೆ ಎಂದು ವ್ಯಂಗ್ಯವಾಡಿದರು.
ಇದೇ ಸಮಯದಲ್ಲಿ ಮಾತನಾಡಿದ ಅವರು, ಅಧಿಕಾರ ಇರದೇ ಇದ್ದರೂ ಸಿಎಂ ಸ್ಥಾನಕ್ಕಾಗಿ ಮೂರು ಗುಂಪುಗಳ ಮದ್ಯೆ ಪೈಪೋಟಿ ಇದೆ. ಅದರಲ್ಲಿ ನಾಲ್ಕನೆಯವರು ಸಹ ಇಣುಕು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ ಮಧ್ಯೆ ಶಾಮನೂರ ಶಿವಶಂಕರಪ್ಪ ಸಹ ನನಗೆ 91 ವಯಸ್ಸು ಆಗಿದೆ, ಸಿಎಂ ಸ್ಥಾನ ಕೊಡಿ ಅಂತಿದ್ದಾರೆ. ಹೀಗಾಗಿ ಅವರಲ್ಲಿಯೇ ಪೈಪೋಟಿ ಹೆಚ್ಚಿದೆ, ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಲು ಹೊರಟಂತಹ ಪರಿಸ್ಥಿತಿ ಕಾಂಗ್ರೆಸ್ಗೆ ಆಗಿದೆ ಎಂದರು.
ಈ ಕುಸ್ತಿ ಇಂದು ನಿನ್ನೆಯದಲ್ಲ, ಈ ಹಿಂದೆಯೂ ಇಂತಹ ಪರಿಸ್ಥಿತಿ ಆಗಿತ್ತು, ಪರಮೇಶ್ವರ್ ಅವರು ಸಹ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತಂದಾಗ ಅವರನ್ನೇ ಸೋಲಿಸಿದ್ದು ಇದೇ ಕಾಂಗ್ರೆಸ್. ಈಗಲೂ ಅಷ್ಟೇ ಒಬ್ಬರಿಗೊಬ್ಬರು ಚಡ್ಡಿ ಹಿಡಿದು ಜಗ್ಗುತ್ತಾರೆ. ಯಾರ ಚಡ್ಡಿ ಉಳಿಯುತ್ತೋ ಅವರು ಮಂತ್ರಿ ಆಗ್ತಾರೆ ಎಂದು ವ್ಯಂಗ್ಯವಾಡಿದರು. ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗೆ ಪ್ರವಾಹವೇನು ಬಂದಿಲ್ಲ, ಬಂದರೂ ಜಿಲ್ಲಾಡಳಿತ ಸಿದ್ಧತೆಯಲ್ಲಿ ಇದೆ ಎಂದರು.
ಓದಿ: '18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ, ಮೊದಲ ಡೋಸ್ ನಂತರ ಕಾಲೇಜು ಆರಂಭಕ್ಕೆ ನಿರ್ಧಾರ'