ಬಾಗಲಕೋಟೆ: ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಬಳಿ ಇರುವ ಸೇತುವೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಡಿಸಿಎಂ, ಘಟಪ್ರಭಾ ನದಿಗೆ 70 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಹಿಡಕಲ್ ಡ್ಯಾಮ್ ನಿಂದ 40 ಸಾವಿರ ಕ್ಯುಸೆಕ್ ನೀರು, ಮಾರ್ಕಂಡೆಯದಿಂದ 13 ಸಾವಿರ, ಹಿರಣ್ಯಕೇಶಿಯಿಂದ 11 ಸಾವಿರ, ಬಳ್ಳಾರಿ ನಾಲಾದಿಂದ 16 ಸಾವಿರ ನೀರು ಬಿಡಲಾಗಿದೆ. ಇದರಿಂದ ಹಳ್ಳ-ಕೊಳ್ಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ ಎಂದು ತಿಳಿಸಿದರು.
ಪ್ರವಾಹದ ಪ್ರಮಾಣ ನಿಯಂತ್ರಣದಲ್ಲಿದೆ. ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿ ಪಾತ್ರದಲ್ಲಿರುವ 31 ಗ್ರಾಮಗಳಿಗೆ ಅಪಾಯವಿರುವ ದೃಷ್ಠಿಯಿಂದ ಜನರ ಸ್ಥಳಾಂತರಕ್ಕೆ ಎಲ್ಲಾ ಶಾಲೆಗಳನ್ನು ಸಜ್ಜುಗೊಳಿಸಲಾಗಿದೆ. ಜಾನುವಾರುಗಳಿಗೆ ಮೇವನ್ನು ಸಂಗ್ರಹಿಸಲಾಗಿದೆ. ಪರಿಸ್ಥಿತಿ ಎದುರಿಸಲು ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ಸಹ ಖರೀದಿಸಲಾಗಿದೆ ಎಂದರು.
ಕೃಷ್ಣಾ ನದಿಗೆ 1.81 ಲಕ್ಷ ಕ್ಯುಸೆಕ್ ನೀರು, ಮಲಪ್ರಭಾ ನದಿಗೆ ನವೀಲು ತೀರ್ಥ ಜಲಾಶಯದಿಂದ 25 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ.
ಜಿಲ್ಲೆಯಲ್ಲಿ ಪ್ರವಾಹ ಮತ್ತು ಮಳೆಯಿಂದಾದ ಹಾನಿಯ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 8 ಸಾವಿರ ಹೆಕ್ಟೇರ್ ಕೃಷಿ ಬೆಳೆ, 8,300 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೀಡಾಗಿವೆ. ಲೋಕೋಪಯೋಗಿ ರಾಜ್ಯ ಹೆದ್ದಾರಿ 94 ಕೊಚ್ಚಿ ಹೋಗಿದೆ. 11 ಸೇತುವೆಗಳು ಹಾನಿಗೊಳಗಾಗಿವೆ. ಜಿಲ್ಲಾ ಮುಖ್ಯ ರಸ್ತೆಗಳು 308 ಕಿ.ಮೀ ಹಾನಿಯಾಗಿರುವುದಾಗಿ ಕಾರಜೋಳ ತಿಳಿಸಿದರು.