ಬಾಗಲಕೋಟೆ : ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಬಡ ಜನರ ಪರವಾಗಿದ್ದು, ಹಿಂದುಳಿದ ಜನಾಂಗದ ಅಭಿವೃದ್ಧಿ ಸೇರಿದಂತೆ ಅವರು ಎಲ್ಲರ ಶ್ರೇಯಸ್ಸು ಬಯಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಮುಧೋಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮ ಮತ್ತು ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 319 ಭೌತಿಕ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದ್ದು, 3 ಕೋಟಿ ರೂಗೂ ಅಧಿಕ ಹಣವನ್ನು ಜಿಲ್ಲೆಯ ಫಲಾನುವಿಗಳಿಗೆ ನೀಡಲಾಗಿದೆ ಎಂದರು.
ಈ ವರ್ಷ ಇಡೀ ರಾಜ್ಯದಲ್ಲಿಯೇ ಹಿಂದುಳಿದ ಜನಾಂಗದ ಅಭಿವೃದ್ಧಿಗಾಗಿ 4,444 ಕೋಟಿ ರೂಪಾಯಿ ಕ್ರಿಯಾ ಯೋಜನೆಯನ್ನು ಸೆಪ್ಟೆಂಬರ್ನಲ್ಲಿ ಹಾಕಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಸರ್ಕಾರದ ಯೋಜನೆಯನ್ನು ಪಡೆದುಕೊಂಡವರೇ ಮತ್ತೆ ಮತ್ತೆ ಪಡೆದುಕೊಳ್ಳದೆ ಇತರರಿಗೂ ಅವಕಾಶ ನೀಡಬೇಕು ಎಂದು ಕಿವಿಮಾತು ನೀಡಿದರು.
ಇದೇ ಸಮಯದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.