ಬಾಗಲಕೋಟೆ: ಮಲಪ್ರಭಾ ನದಿಯ ಒತ್ತುವರಿ ತೆರವು ಸೇರಿದಂತೆ, ಪ್ರವಾಹದಿಂದ ಹಾನಿಗೆ ಒಳಗಾಗಿರುವವರಿಗೆ ಪರಿಹಾರ ನೀಡಲು ಸುಮಾರು 875 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪ್ರವಾಹದಿಂದ ಕೃಷಿ, ತೋಟಗಾರಿಕೆ ಬೆಳೆಗಳು, ರಸ್ತೆ, ಸೇತುವೆ, ಮನೆಗಳು ಹಾನಿಗೊಳಗಾಗಿವೆ. ಒಟ್ಟು 875 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದರು.
ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಆಲಮಟ್ಟಿಗೆ ಬಾಗಿನ ಅರ್ಪಣೆಗೆ ಬರುವ ಹಿನ್ನೆಲೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಮಲಪ್ರಭಾ ನದಿ ಖಾನಾಪುರದಿಂದ ಬಂದು ಕೂಡಲಸಂಗಮಕ್ಕೆ ಸೇರುತ್ತದೆ. ಒತ್ತುವರಿ ಆದ ಪರಿಣಾಮ 135 ಮೀಟರ್ ಅಗಲ ಇದ್ದ ನದಿಯು ಈಗ 3 ರಿಂದ10 ಮೀಟರ್ಗೆ ಬಂದಿದೆ. ಇದರಿಂದ ನವಿಲು ತೀರ್ಥದಿಂದ ಕೇವಲ 2 ಸಾವಿರ ಕ್ಯೂಸೆಕ್ ನೀರು ಬಿಟ್ಟರೂ ಪ್ರವಾಹ ಭೀತಿ ಉಂಟಾಗುತ್ತಿದೆ. 5 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ, ಗ್ರಾಮದಲ್ಲಿ ನೀರು ನುಗ್ಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಒತ್ತುವರಿ ಆಗಿರುವ ಬಗ್ಗೆ ಮಾಹಿತಿ ನೀಡಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ತೆರವುಗೊಳಿಸುವ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.