ಬಾಗಲಕೋಟೆ: ಕೇಂದ್ರ ಸರ್ಕಾರವು ಪತ್ತಿನ ಸಹಕಾರ ಸಂಘಗಳಿಗೆ ವಿಧಿಸಿರುವ ಜಿಎಸ್ಟಿ ಮತ್ತು ಆದಾಯ ತೆರಿಗೆಯನ್ನು ವಿರೋಧಿಸಿ ಜಿಲ್ಲಾಡಳಿತ ಭವನ ಎದುರು ವಿವಿಧ ಪತ್ತಿನ ಸಹಕಾರ ಸಂಘಗಳ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ಇಂದು ಜಿಲ್ಲಾಡಳಿತ ಭವನದ ಎದುರು ಡಿಸಿಸಿ ಬ್ಯಾಂಕ್ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾದ ಅಜೇಯ ಕುಮಾರ ಸರನಾಯಕ ಮಾತನಾಡಿ, ಕೇಂದ್ರ ಸರ್ಕಾರ ವಿನಾಕಾರಣ ಸಹಕಾರಿ ಬ್ಯಾಂಕ್ಗಳಿಗೆ ಕಿರುಕಳ ನೀಡುತ್ತದೆ. ನೋಟ್ ಬ್ಯಾನ್ ನಂತರ ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಹೇರಿ ಬ್ಯಾಂಕಿನ ಅಧೋಗತಿಗೆ ಕಾರಣವಾಗುತ್ತಿದೆ. ಇದರಿಂದ ರೈತರ ಕುಟುಂಬದವರು ಸೇರಿದಂತೆ ಇತರ ಮಧ್ಯಮ ವರ್ಗದವರಿಗೂ ತೊಂದರೆ ಆಗುತ್ತಿದೆ. ಹಾಗಾಗಿ ಸರ್ಕಾರ ಈ ಕೂಡಲೇ ತನ್ನ ನಿಲುವು ಬದಲಾಯಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಸ್.ಜಿ.ನಂಜಯ್ಯನಮಠ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡು ಕೇಂದ್ರ ಸರ್ಕಾರದ ಈ ನೀತಿಯನ್ನು ವಿರೋಧಿಸಿದರು.