ಬಾಗಲಕೋಟೆ: ಎರಡೇ ಎರಡು ದಿನದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ಬಾಗಲಕೋಟೆ ಜಿಲ್ಲೆಯ ಕಮತಗಿ ಗ್ರಾಮದ ಸೈನಿಕನೋರ್ವ ಆಕಸ್ಮಿಕ ಗುಂಡು ತಗುಲಿ ಮೃತಪಟ್ಟಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದಲ್ಲಿ ವಿಐಪಿಗಳ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರಿಯಪ್ಪ ರಾಮಣ್ಣ ಕಿರಸೂರ (28) ಮೃತಪಟ್ಟ ಸೈನಿಕ ಎಂದು ತಿಳಿದು ಬಂದಿದೆ. ಯೋಧನ ಅಕಾಲಿಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃತ ಸೈನಿಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕರ್ತವ್ಯದಲ್ಲಿದ್ದಾಗ ಆಕಸ್ಮಿಕ ಗುಂಡು ತಗುಲಿ ಮೃತಪಟ್ಟಿರುವುದಾಗಿ ಪಾಟ್ನಾ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಗಿರಿಯಪ್ಪ 2012 ರಲ್ಲಿ ಸಿಆರ್ಪಿಎಫ್ಗೆ ಸೇರ್ಪಡೆಯಾಗಿದ್ದರು. ಬಡತನದಲ್ಲಿ ಹುಟ್ಟಿ ಬೆಳೆದಿದ್ದ ಅವರು, 2018 ಎಪ್ರಿಲ್ 20 ರಂದು ವಿವಾಹವಾಗಿದ್ದರು. ಅಕ್ಕ, ತಂದೆ-ತಾಯಿ ಹಾಗೂ ಪತ್ನಿ ಇದ್ದು, ಸೈನಿಕ ಗಿರಿಯಪ್ಪನಿಂದಲೇ ಉಪಜೀವನ ಸಾಗಿಸುತ್ತಿದ್ದರು. ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಇದೀಗ ಸ್ಮಶಾನಮೌನ ಆವರಿಸಿದೆ. ಇನ್ನು ಪಾರ್ಥಿಶರೀರ ಪಾಟ್ನಾದಿಂದ ನಾಳೆ ಬರಲಿದ್ದು, ಕಮತಗಿ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.