ಬಾಗಲಕೋಟೆ: ಜಿಲ್ಲೆಯ ಇಬ್ಬರು ಮಾಜಿ ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಶಂಕೆಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇಬ್ಬರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.
ಬಾಗಲಕೋಟೆ ನಗರದ ವೈದ್ಯರೊಬ್ಬರಿಗೆ ಸೋಂಕು ಹರಡಿರುವ ಹಿನ್ನಲೆ, ಮಾಜಿ ಶಾಸಕರಾದ ಹೆಚ್.ವೈ ಮೇಟಿ ಆ ವೈದ್ಯರ ಜೊತೆ ಸಂಪರ್ಕ ಹೊಂದಿದ್ದರು ಎಂದು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಜೊತೆಗೆ ಅವರಿಗೂ ಸಹ ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ಹಬ್ಬಿತ್ತು.
ಇದೀಗ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿ ಬಳಗಕ್ಕೆ ಸಂತಸ ಮೂಡಿಸಿದೆ.
ಅದೇ ರೀತಿ ಇಲಕಲ್ಲ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾದ ಸುಮಾರು 12 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ಮದುವೆಗೆ ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ ಸಹ ಭಾಗಿಯಾಗಿದ್ದರು. ಅವರನ್ನು ಸಹ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಚರ್ಚೆಯಾಗಿತ್ತು. ಇದೀಗ ಕಾಶಪ್ಪನವರ ವರದಿ ಸಹ ನೆಗೆಟಿವ್ ಬಂದಿದ್ದು, ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.